

ಮುಂಬೈ: ತಾಯಿಗಿಂತ ದೇವರಿಲ್ಲ ಎಂಬ ಮಾತನ್ನು ಸುಮ್ಮನೆ ಹೇಳಿಲ್ಲ. ಮಕ್ಕಳಿಗೆ ಯಾವ ಕಷ್ಟ ಬಾರದಂತೆ ತಾಯಿಯು ಎಚ್ಚರದಿಂದ ಕಾಳಜಿ ವಹಿಸುತ್ತಾರೆ. ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಯಾವಾಗಲೂ ಸಿದ್ಧರಿರುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹಾಡಹಗಲಿನಲ್ಲಿಯೇ ಮಗನನ್ನು ಕೊಚ್ಚಿ ಕೊಲೆ ಮಾಡಲು ಬಂದ ಕೊಲೆಗಾರನನ್ನು ತಾಯಿಯೊಬ್ಬರು ಓಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.
ಕೊಲ್ಲಾಪುರದ ಜೈಸಿಂಗ್ಪುರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ತಾಯಿಯ ಧೈರ್ಯವನ್ನು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ವಿಡಿಯೋದಲ್ಲಿ ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡು ಮಗ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದಾನೆ. ಅದೇ ಸಮಯದಲ್ಲಿ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಅದರಲ್ಲೊಬ್ಬ ತಾಯಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಕತ್ತಿ ಬೀಸುತ್ತಾನೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಆ ವ್ಯಕ್ತಿಯ ತಾಯಿ, ಕೆಳಗಿದ್ದ ಕಲ್ಲನ್ನು ಎತ್ತಿಕೊಂಡು ಕತ್ತಿ ಬೀಸಿದವನಿಗೆ ಹೊಡೆಯಲು ಮುಂದಾಗುತ್ತಾರೆ. ಬಳಿಕ ಜತೆಗೆ ಮಗನು ತಾಯಿಯ ಜತೆ ಸೇರಿ ಕಲ್ಲನ್ನಿಂದ ಹೊಡೆಯುತ್ತಾನೆ. ಆ ಮೂವರು ಅಲ್ಲಿಂದ ಪರಾರಿಯಾಗುವುದನ್ನುಕಾಣಬಹುದಾಗಿದೆ.
ಕೊಲೆ ಮಾಡಲು ಯತ್ನಿಸಿದವರೊಂದಿಗೆ ಆ ವ್ಯಕ್ತಿ ಜಗಳವಾಡಿದ್ದ. ಇದು ದಾಳಿ ಮಾಡಲು ಪ್ರಚೋದನೆಯಾಗಿದೆ. ಆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. (ಏಜೆನ್ಸೀಸ್)