

ಶಿವಮೊಗ್ಗ: ಇಬ್ಬರು ಮಕ್ಕಳೊಂದಿಗೆ ತಾಯಿ ಜಲಸಮಾಧಿಯಾಗಿರುವ ದುರ್ಘಟನೆ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಹಿರೇಚೌಟಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ.
ವಿದ್ಯಾ (32) ಮತ್ತು ಇವರ ಮಕ್ಕಳಾದ ಕನ್ನಿಕಾ(6), ನಯನಾ (3) ಮೃತ ದುರ್ದೈವಿಗಳು.
ತಾಯಿ ಹಾಗೂ ಮಕ್ಕಳು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ವಿದ್ಯಾಳ ತವರು ಮನೆಯವರು ಇದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ಶಂಕಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟ ಕಂದಮ್ಮಗಳ ಮತ್ತು ತಾಯಿ ಶವವನ್ನು ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.