ಆಟೋಗೆ ವಂದೇ ಭಾರತ್ ರೈಲು ಡಿಕ್ಕಿ; ತಾಯಿ, ಇಬ್ಬರು ಹೆಣ್ಣು ಮಕ್ಕಳು ಮೃತ್ಯು

Vande Bharat
Published on

ಲಖನೌ: ಆಟೋಗೆ ವಂದೇ ಭಾರತ್​ ರೈಲು ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಮೀರತ್‌ನ ಕಂಕರ್‌ಖೇಡಾ ಪ್ರದೇಶದ ಕಾಸಿಂಪುರ ಗೇಟ್‌ ಬಳಿ ಘಟನೆ ನಡೆದಿದ್ದು, ರೈಲ್ವೆ ಗೇಟ್​ ದಾಟುವ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಡೆಹ್ರಾಡೂನ್ ಕಡೆಗೆ ಹೋಗುತ್ತಿದ್ದ ವಂದೇ ಭಾರತ್‌ ರೈಲು ಆಟೋ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಕಂಕರಖೇಡದ ಅಶೋಕಪುರಿ ನಿವಾಸಿ ನರೇಶ್ ಅವರು ಪತ್ನಿ ಲಕ್ಷ್ಮಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮನೆಗೆ ಮರಳುತ್ತಿದ್ದರು. ಮಹಿಳೆಯ ಪತಿ ರಮೇಶ್​ ಆಟೋ ಓಡಿಸುತ್ತಿದ್ದು, ಹೆಂಡತಿ ಹಾಗೂ ಪುತ್ರಿಯರು ಹಿಂದೆ ಕುಳಿತಿದ್ದರು.

ಕಾಸಿಂಪುರ ಗೇಟ್ ಮುಚ್ಚಿದಾಗ, ಅವರು ಅದರ ಕೆಳಗಿನಿಂದ ಹೊರ ಹೋಗಲು ಯತ್ನಿಸಿದಾಗ ವಂದೇ ಭಾರತ್ ರೈಲು ಬಂದು ರಿಕ್ಷಾದ ಹಿಂಬದಿ ಡಿಕ್ಕಿ ಹೊಡೆದಿದೆ. ಇದರಿಂದ ಲಕ್ಷ್ಮಿ (40) ಹಾಗೂ ಇಬ್ಬರು ಪುತ್ರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಸ್ವಲ್ಪ ಸಮಯ ಸ್ಥಳದಲ್ಲಿ ನಿಲ್ಲಿಸಿ ನಂತರ ಡೆಹ್ರಾಡೂನ್ ಕಡೆಗೆ ಹೊರಟಿತು.

ಮೂವರ ಮೃತ ದೇಹಗಳನ್ನು ನೋಡಿದ ರಮೇಶ್​ಪ್ರಜ್ಞೆ ತಪ್ಪಿದ್ದಾರೆ, ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ತಂಡವನ್ನು ನೇಮಿಸಲಾಗಿದ್ದು, ತನಿಖಾ ತಂಡ ಸಲ್ಲಿಸುವ ವರದಿ ಆಧಾರದ ಮೇಲೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net