

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರೇ ಹೆಚ್ಚು ಎಂದು ವಿಧಾನಸಭೆಯ ಉಪಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಹುಳಿಮಾವು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮರುನಿರ್ವಣಗೊಂಡಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಹಲವು ಪ್ರತಿಷ್ಠಿತ ಸ್ಥಾನಗಳಲ್ಲಿರುವವರು ಸರ್ಕಾರಿ ಶಾಲೆಗಳಲ್ಲಿ ಓದಿದವರು ಎಂಬ ಅರಿವು ಪಾಲಕರಿಗಿದೆ. ಆದರೂ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬೇಕು ಎಂದು ಹಪಾಹಪಿಸುತ್ತಾರೆ. ಇದಕ್ಕಾಗಿ ಸಾಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ.
ಪಾಲಕರು ತಮ್ಮ ಈ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲೂ ಉತ್ತಮ ವಿದ್ಯಾಭ್ಯಾಸ ಕೊಡಿಸಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಸಮಾಜ ಸೇವಕ ಸಿ. ಲಕ್ಷ್ಮೀನಾರಾಯಣ್ ಮಾತ ನಾಡಿ, ಹುಳಿಮಾವು ಗ್ರಾಮದ ಹಲವು ಮುಖಂಡರು ಒಟ್ಟಾಗಿ ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ. ಹಲವು ವರ್ಷಗಳ ಹಿಂದೆ ವೈಯಕ್ತಿಕವಾಗಿ ಕಂಪ್ಯೂಟರ್, ಪೀಠೋಪಕರಣ, ಕುಡಿಯುವ ನೀರು, ಶೌಚಗೃಹ ನಿರ್ವಿುಸಿಕೊಟ್ಟಿದ್ದವು. ಮುಂದೆ ಕೂಡ ಇನ್ನೂ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಶಾಲೆಯ ಎಲ್ಲ ಮಕ್ಕಳಿಗೂ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಲಾಯಿತು. ನಿವೃತ್ತ ಪೊಲೀಸ್ ಅಧೀಕ್ಷಕ ಎಚ್.ಕೆ. ವೆಂಕಟಸ್ವಾಮಿ ಶೀಘ್ರದಲ್ಲೇ ಎಲ್ಲ ಮಕ್ಕಳಿಗೂ ಶಾಲಾ ಬ್ಯಾಗ್ ವಿತರಿಸುವುದಾಗಿ ಭರವಸೆ ನೀಡಿದರು.
20 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ಮರುನಿರ್ವಣ
ಹುಳಿಮಾವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾಗಿ ಶಿಥಿಲಾವಸ್ಥೆ ತಲುಪಿತ್ತು. ತಾವು ಓದಿದ ಶಾಲೆಯ ದುಸ್ಥಿತಿಗೆ ಮರುಗಿದ ಎಟಿಬಿ ಕಂಪನಿಯ ಮಾಲೀಕ ಟಿ. ಶ್ರೀನಿವಾಸ ರೆಡ್ಡಿ ಸದ್ಯ 428 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ, 12 ಶಿಕ್ಷಕರು ಮತ್ತು 3 ಬೋಧಕೇತರ ಸಿಬ್ಬಂದಿ ಇರುವ ಶಾಲೆಯ ಕಟ್ಟಡವನ್ನು ಮರುನಿರ್ವಿುಸಿಕೊಡಲು ನಿರ್ಧರಿಸಿದರು. ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ವಿುಸಿಕೊಟ್ಟಿದ್ದಾರೆ. ಮಕ್ಕಳಿಗೆ ಸಮವಸ್ತ್ರ ಹಾಗೂ ಶಿಕ್ಷಕರಿಗೆ ಬಟ್ಟೆಗಳನ್ನು ವಿತರಿಸಿದ್ದಾರೆ. ಪೀಠೋಪಕರಣಗಳ ವ್ಯವಸ್ಥೆ ಮಾಡಿದ್ದಾರೆ. ಇವರಂತೆ ಸಮಾಜಸೇವಕ ಸಿ. ಲಕ್ಷ್ಮೀನಾರಾಯಣ್ ಶಾಲೆಗೆ ಶೌಚಗೃಹ ನಿರ್ವಿುಸಿ ಕೊಟ್ಟಿರುವುದಲ್ಲದೆ, ಕಂಪ್ಯೂಟರ್, ಕುಡಿಯುವ ನೀರಿನ ಘಟಕ, ಬೆಂಚು ಮತ್ತು ಮೇಜುಗಳನ್ನು ಒದಗಿಸಿದ್ದಾರೆ.