

- ಅಮಿತ ಹೆಬ್ಬಾರ್
ಗೋ ಪರಿಪಾಲಕ, ಬೆಣ್ಣೆ ಚೋರ, ಸ್ತ್ರೀಲೋಲ, ದೇವಕೀ ನಂದನ... ಹೀಗೆ ನಾನಾ ಬಗೆಯ ಮುದ್ದು ಹೆಸರುಗಳಿಂದ ಕರೆಯಲ್ಪಡುವ ಶ್ರಿಕೃಷ್ಣ ಜನಿಸಿದ ದಿನವನ್ನು ಸಾವಿರಾರು ವಷರ್ಗಳಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಮನೆಯಲ್ಲಿಯೇ ಕೃಷ್ಣನನ್ನು ಪೂಜಿಸಿ, ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಲಾಗುತ್ತದೆ.
ಸದಾ ಹಸನ್ಮುಖಿಯಾಗಿರುವ ಶ್ರೀಕೃಷ್ಣನ ದರ್ಶನ ಪಡೆದರೆ ಮನಸ್ಸಿಗೇನೋ ನೆಮ್ಮದಿ. ಎಲ್ಲೆಡೆ ಕೃಷ್ಣನ ಕುರಿತು ಭಕ್ತಿ, ಶ್ರದ್ಧೆ, ವ್ರತಗಳ ಕುರಿತು ಮಾತನಾಡಲಾಗುತ್ತಿದೆ. ಕೃಷ್ಣನ ಚೈತನ್ಯ ಮನಸ್ಸಿನಲ್ಲಿ ತುಂಬಿಕೊಳ್ಳಬೇಕಾದರೆ ನೀವು ಕರ್ನಾಟಕದ ಈ ದೇವಾಲಯಗಳಿಗೆ ಭೇಟಿ ನೀಡಿ ಶ್ರೀ ಕೃಷ್ಣ ಪರಮಾತ್ಮನ ದರ್ಶನ ಪಡೆಯಲೇಬೇಕು.
ಉಡುಪಿ ಶ್ರೀ ಕೃಷ್ಣ ಮಠ: ಉಡುಪಿ ಮಠದ ಶ್ರಿಕೃಷ್ಣ ದೇವಸ್ಥಾನಕ್ಕೆ ದೊಡ್ಡ ಕಥೆ ಇದೆ. ಕೃಷ್ಣ ಮಠವನ್ನು ಸುಮಾರು 13ನೇ ಶತಮಾನದಲ್ಲಿ ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಮಧ್ವಾಷಚಾರ್ಯರು ನಿರ್ಮಿಸಿದರು ಎನ್ನಲಾಗುತ್ತದೆ. ಇಲ್ಲಿನ ಶ್ರೀ ಕೃಷ್ಣನ ಮೂರ್ತಿಯನ್ನು ದ್ವಾಪರ ಯುಗದಲ್ಲಿ ರುಕ್ಮಿಣಿ ಪೂಜಿಸುತ್ತಿದ್ದಳು ಎಂಬ ಪ್ರತೀತಿ ಇದೆ. ಕನಕದಾಸರ ಹಾಡಿಗೆ ಓಗೊಟ್ಟು ಕೃಷ್ಣ ಅವರೆಡೆಗೆ ತಿರುಗಿ ದರ್ಶನ ಕೊಟ್ಟ ಕುರುಹಿಗೆ ಕನಕನ ಕಿಂಡಿ ಕೂಡ ಬಹಳ ಪ್ರಸಿದ್ಧಿ ಪಡೆದಿದೆ. ಜನ್ಮಾಷ್ಟಮಿಯ ಸಮಯದಲ್ಲಿ ಇಲ್ಲಿ ವಿಶೇಷ ಪುಜೆ ಮತ್ತು ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಿಕ್ಕಿರಿದು ಸೇರುತ್ತಾರೆ.
ಇಸ್ಕಾನ್ ದೇವಾಲಯ: ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯ ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. 1997ರ ಸಮಯದಲ್ಲಿ ಸ್ಥಾಪನೆಯಾದ ಈ ದೇವಾಲಯದ ಮುಖ್ಯ ಆಕರ್ಷಣೆ ಅದ್ಭುತ ವಾಸ್ತು ಶಿಲ್ಪ. ಅಮೃತ ಶಿಲೆಯಲ್ಲಿ ನಿರ್ಮಾಣವಾದ ರಾಧಾ ಕೃಷ್ಣ ಮೂರ್ತಿಗಳನ್ನು ಇಲ್ಲಿ ಸಿಂಗರಿಸಿ ಪೂಜಿಸುವ ರೀತಿ ಮನಸೂರೆಗೊಳಿಸುತ್ತದೆ. ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.
ಗೋಪಾಲ ಕೃಷ್ಣ ದೇವಸ್ಥಾನ, ಮಂಗಳೂರು: ಒಂದು ಕೈಯಲ್ಲಿ ಬೆಣ್ಣೆ ಮತ್ತು ಇನ್ನೊಂದು ಕೈಯಲ್ಲಿ ಕೊಳಲು ಹಿಡಿದು, ರಾಧಾ ಸಮೇತನಾಗಿ ನಿಂತಿರುವ ಕೃಷ್ಣನನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು ಮಂಗಳೂರಿನ ಗೊಪಾಲ ಕೃಷ್ಣ ದೇವಸ್ಥಾನಕ್ಕೆ ಬರಲೇ ಬೇಕು. ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿರುವ ಗೋಪಾಲ ಕೃಷ್ಣನ ವಿಗ್ರಹವನ್ನು ಸುಮಾರು 13ನೇ ಶತಮಾನದಲ್ಲಿ ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತದೆ. ಈ ಪ್ರಸಿದ್ಧ ದೇವಸ್ಥಾನಕ್ಕೆ ಕೂಡ ಕೃಷ್ಣಾಷ್ಟಮಿಯಂದು ಭಕ್ತ ಸಾಗರವೇ ಹರಿದು ಬರುತ್ತದೆ.
ವೇಣುಗೋಪಾಲ ಸ್ವಾಮಿ ದೇವಸ್ಥಾನ ಮೈಸೂರು : ಕೆ.ಆರ್.ಎಸ್ ಆಣೆಕಟ್ಟಿನ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದೆ. ಮೂಲ ದೇವಸ್ಥಾನ ಕನ್ನಂಬಾಡಿ ಕಟ್ಟೆ ಕಟ್ಟುವಾಗ ಮುಳುಗಡೆಯಾಗಿತ್ತು. ಆದ್ದರಿಂದ ನಾಲ್ವಡಿ ಕೃಷ್ಣ ರಾಜ ಒಡಯರ್ ನೇತೃತ್ವದಲ್ಲಿ ಈಗಿರುವ ಜಾಗಕ್ಕೆ ವೇಣುಗೋಪಾಲ ಸ್ವಾಮಿಯ ಮೂರ್ತಿಯನ್ನು ಸ್ಥಳಾಂತರಿಸಲಾಗಿದೆ.