

ಭಾರತದಲ್ಲಿ ಕೋವಿಡ್ ಸೋಂಕು ಆರ್ಥಿಕವಾಗಷ್ಟೇ ಅಲ್ಲ, ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ. ಎರಡನೇ ಅಲೆ ವೇಳೆಯ ಲಾಕ್ಡೌನ್ ಕಾರಣ ಉದ್ಯೋಗ ನಷ್ಟ ಅಥವಾ ಸಂಬಳ ಕಡಿತಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಸ್ತ್ರೀಯರಾಗಿದ್ದಾರೆ. ಕರೊನಾ ಸಾಂಕ್ರಾಮಿಕದ ವೇಳೆ ಜಗತ್ತಿನಲ್ಲೇ ಅತಿ ಹೆಚ್ಚು ಸಂಕಷ್ಟ ಅನುಭವಿಸುತ್ತಿರುವವರು ಭಾರತದ ನಾರಿಯರು ಎಂಬ ಅಂಶದತ್ತ ಬ್ಲೂಮ್ ಬರ್ಗ್ ವರದಿ ಬೆಳಕು ಚೆಲ್ಲಿದೆ. ಅನೇಕ ಮಹಿಳೆಯರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ವೇಳೆ, ಗೃಹಿಣಿಯರ ಮೇಲೆ ಒತ್ತಡ ಹೆಚ್ಚಾಗಿದೆ. ಪರಿಣಾಮ ಅವರ ಮಾನಸಿಕ ಆರೋಗ್ಯದ ಮೇಲೂ ಆಗಿದೆ. ಎರಡನೇ ಅಲೆಯಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ.
ಲಸಿಕೆ ಪಡೆಯುವಲ್ಲೂ ಹಿಂದೆ: ಭಾರತದಲ್ಲಿ ಲಸಿಕೆ ಪಡೆದವರ ಡೇಟಾ ಗಮನಿಸಿದರೆ, ಪುರುಷರದ್ದೇ ಪಾರಮ್ಯ. ಲಸಿಕೆ ಪಡೆದವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಈ ಕುರಿತು ನಡೆಸಲಾದ ಜಾಗೃತಿ ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರ ಪೈಕಿ 85 ಜನರಿಗೆ ಲಸಿಕೆ ಅಭಿಯಾನದ ಮಾಹಿತಿ ಇದೆ. ಶೇಕಡ 39 ಮಹಿಳೆಯರಷ್ಟೇ ಲಸಿಕೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ದ ನಡ್ಜ್ ಫೌಂಡೇಶನ್ ವರದಿ ತಿಳಿಸಿದೆ.
ಶೇ.76 ಆದಾಯ ಕಡಿತ
ಸೋಂಕು ಸಾಂಕ್ರಾಮಿಕ ತಡೆಯಲು ಜಾರಿಗೊಳಿಸಿರುವ ಲಾಕ್ಡೌನ್ ಪರಿಣಾಮ ಮಹಿಳೆಯರ ವಾರದ ಆದಾಯದಲ್ಲಿ ಶೇಕಡ 76 ನಷ್ಟವಾಗಿದೆ. ಅವರ ಉಳಿತಾಯವೂ ಕರಗಿದೆ. ಆಹಾರ ಮತ್ತು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಸಮಸ್ಯೆ ಮಹಿಳೆಯರನ್ನು ಬಾಧಿಸಿದ್ದು, ಕೆಲಸ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ ಎಂಬ ಅಂಶದತ್ತ ದ ನಡ್ಜ್ ಫೌಂಡೇಶನ್ ಅಧ್ಯಯನ ವರದಿ ಬೆಳಕು ಚೆಲ್ಲಿದೆ.
ಬದುಕಿನ ಮೇಲೆ ಸಂಕಷ್ಟ
ಭಾರತದಲ್ಲಿ ಕೋವಿಡ್ ಕಾರಣ ಅನೇಕರ ವೇತನ ಕಡಿತವಾಗಿದೆ. ಹಲವರ ಉದ್ಯೋಗ ನಷ್ಟವಾಗಿದೆ. ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಿದೆ. ಪುರುಷರಿಗಿಂತ ಹೆಚ್ಚು ಮಹಿಳೆಯರೇ ನೊಂದು ಬೆಂದಿದ್ದಾರೆ. ಜಾಗತಿಕವಾಗಿ ಗಂಡು ಮತ್ತು ಹೆಣ್ಣು ಲಿಂಗ ತಾರತಮ್ಯಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಗಮನಿಸಿದಾಗ ವೇತನ ಇಲ್ಲದೆ ಮನೆಗೆಲಸ ಮಾಡುತ್ತಿರುವ ಹೆಣ್ಣು ಮಕ್ಕಳು ಮತ್ತು ಅವರ ಮಾನಸಿಕ ಆರೋಗ್ಯ ತುಂಬ ಗಂಭೀರವಾಗಿದೆ. ಇದು ಭಾರತಕ್ಕೆ ಸಂಬಂಧಿಸಿ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.
ಲಾಕ್ಡೌನ್ ಪರಿಣಾಮ
ಲಾಕ್ಡೌನ್ ಕಾರಣ ಕಳೆದ ಎರಡು ತಿಂಗಳ ಅವಧಿಯಲ್ಲಿ 1.70 ಕೋಟಿ ಉದ್ಯೋಗ ನಷ್ಟ ಉಂಟಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 17ರ ತನಕ ಹೆಚ್ಚಾಗಿದೆ. ಇದು ಪುರುಷರಿಗೆ ಹೋಲಿಸಿದರೆ ದುಪ್ಪಟ್ಟು ಇದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೖೆವೇಟ್ ಲಿಮಿಟೆಡ್ನ ಅಧ್ಯಯನ ವರದಿ ಹೇಳಿದೆ.