

ಶಿರಾಳಕೊಪ್ಪ: ರಾಜ್ಯದಲ್ಲಿ ಶಾಲೆಗಳಿಗೆ ಸರ್ಕಾರ ನೀಡಿದ ಜಾಗಕ್ಕಿಂತ ಭೂದಾನ ನೀಡಿದ ಜಮೀನು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಾವಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಹಾಲು, ರಾಗಿಮಾಲ್ಟ್ ಸೇರಿದಂತೆ ಪುಸ್ತಕ, ಸಮವಸ ನೀಡಲು 45 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದರು.
ಶತಮಾನೋತ್ಸವದ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿ ಮನವಿ ಮೇರೆಗೆ 4 ಕೊಠಡಿ ಮಂಜೂರು ಮಾಡಲಾಗುವುದು. ಮುಂದಿನ ವರ್ಷ ಸ್ಮಾರ್ಟ್‌ಕ್ಲಾಸ್ ನೀಡಲಾಗುವುದು. ಶಾಲೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರ ಮನೆಗೆ ಬೆಳಕಾಗಲು ಗೃಹಜ್ಯೋತಿ, ಗೃಹಲಕ್ಷ್ಮಿ, ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಗೌಡ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ನೀಗಿಸಲು ಸರ್ಕಾರ ಮೊಟ್ಟೆ ವಿತರಿಸಲು ಕ್ರಮ ಕೈಗೊಂಡಿದೆ ಎಂದರು.
ಶಾಲೆಗೆ 2 ಎಕರೆ ಜಮೀನು ದಾನ ನೀಡಿದ ಬಸವರಾಜಯ್ಯ ಅವರನ್ನು ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಾಸೀರ್, ಸದಸ್ಯರಾದ ಎಂ.ಆರ್.ರಾಘವೇಂದ್ರ, ಪಿ.ಜಾರ್, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿ.ಈಶಪ್ಪ, ಗ್ರಾಪಂ ಸದಸ್ಯ ಪುಟ್ಟಪ್ಪ, ಶಶಿಕಲಾ, ಬಿಇಒ ಲೋಕೇಶ್ ಇತರರಿದ್ದರು.