

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅಕ್ರಮ ಮಸೀದಿ ನಿರ್ಮಾಣವನ್ನು ವಿರೋಧಿಸಿ ಹಲವಾರು ಹಿಂದೂ ಸಂಘಟನೆಗಳು ಬುಧವಾರ(ಸೆ.11) ಪ್ರತಿಭಟನೆಗೆ ಇಳಿದವು. ಆದರೆ ಆಅಡಳಿತ ನಿಷೇಧಾಜ್ಞೆ ವಿಧಿಸಿದ್ದು, ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ತಳ್ಳಿ ಮುಂದೆ ಹೋಗಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಜನರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಅನಧಿಕೃತವಾಗಿ ಮಸೀದಿ ನಿರ್ಮಿಸಿರುವ ಕುರಿತು ಅಧಿಕಾರಿಗಳಿಗೆ ಎಷ್ಟೇ ಬಾರಿ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದು ಪ್ರಾರ್ಥನಾ ಮಂದಿರವೋ ಇಲ್ಲವೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಟ್ಟಡದ ಕಾನೂನುಬದ್ಧತೆ ಪ್ರಶ್ನೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ಬೃಹತ್ ಪ್ರತಿಭಟನೆಗೆ ಇಳಿದಿದ್ದರು.
ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಬರುತ್ತಿದ್ದಂತೆ ಜಲಫಿರಂಗಿಗಳನ್ನು ಬಳಸಿ ತಡೆದರು. ಪೊಲೀಸರು ಹಲವು ಬಾರಿ ಮನವಿ ಮಾಡಿದರೂ ಪ್ರತಿಭಟನಾಕಾರರು ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವಂತೆ ಘೋಷಣೆಗಳನ್ನು ಕೂಗಿದರು.
ಏನಿದು ವಿವಾದ: ಮೂಲತಃ ಅಂಗಡಿ ಇದ್ದ ಸ್ಥಳದಲ್ಲಿ ಐದಂತಸ್ತಿನ ಮಸೀದಿ ನಿರ್ಮಾಣ ಪ್ರಾರಂಭವಾಗಿದೆ. ಅನೇಕ ಸೂಚನೆಗಳ ಹೊರತಾಗಿಯೂ, ಮಸೀದಿಯನ್ನು 6750 ಚದರ ಅಡಿಗಳಷ್ಟು ವಿಸ್ತರಿಸಲಾಯಿತು. ಈ ಸ್ಥಳ ಹಿಮಾಚಲ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದರೆ, ಮಸೀದಿಯ ಇಮಾಮ್, ಇದು 1947 ರ ಹಿಂದಿನದು ಮತ್ತು ವಕ್ಫ್ ಮಂಡಳಿಯ ಆಸ್ತಿ ಎಂದು ಹೇಳುತ್ತಾರೆ. ಮಸೀದಿಯನ್ನು ವಿಸ್ತರಿಸಿ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.