

ನೆಲಮಂಗಲ: ತಾಲೂಕಿನ ಆನಂದ್‌ನಗರದ ಮಸೀದಿಯಲ್ಲಿ ಅಜಾನ್ ಕೂಗುವ ವಿಚಾರಕ್ಕೆ ಬುಧವಾರ ರಾತ್ರಿ ಎರಡು ಸಮುದಾಯಗಳ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿಕೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ 29 ಮಂದಿ ವಿರುದ್ಧ ದೂರು ದಾಖಲಾಗಿದ್ದು ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮೇ 6 ರ ರಾತ್ರಿ 8 ಗಂಟೆಗೆ ದಿನ ನಿತ್ಯದಂತೆ ಮಸೀದಿಯಲ್ಲಿ ಅಜಾನ್ ಕೂಗುವ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಪ್ಪ, ಧ್ವನಿವರ್ಧಕ ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಸೀದಿಯಲ್ಲಿದ್ದ ಜಬೀ ಎಂಬಾತ ಇದಕ್ಕೆ ಸಮ್ಮತಿಸದೆ ಅವಾಚ್ಯವಾಗಿ ನಿಂದಿಸಿ ಸಿದ್ದಪ್ಪರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ವಿಷಯ ತಿಳಿದು ಪ್ರಶ್ನಿಸಲು ಬಂದ ಸಿದ್ದಪ್ಪನ ಸಂಬಂಧಿ ಮೋಹನ್ ಮೇಲೂ ಹಲ್ಲೆ ನಡೆಸಿದ್ದ. ಗಲಾಟೆ ವಿಚಾರ ಹರಡುತ್ತಿದ್ದಂತೆ ಆನಂದ ನಗರ ಕಾಲನಿ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯವರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಮಸೀದಿಯಲ್ಲಿದ್ದವರು ಹಿಂದುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತರಾಜು ಎಂಬುವರು ದೂರಿದ್ದಾರೆ.
ಪ್ರಮುಖ ಆರೋಪಿಗಳಾದ ಗ್ರಾಮದ ಜಬಿಉಲ್ಲಾ, ಶಕೀಲ್, ಷಹೀಲ್, ಫಜೀಲ್, ಉಸ್ಮಾನ್, ನಿಸಾರ್, ಯಾಸೀನ್, ಇಮ್ರಾನ್ ಸೇರಿ 29 ಮಂದಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸೌಹಾರ್ದತೆಯಿಂದ ಜೀವನ ನಡೆಸುವಂತೆ ಎರಡು ಸಮುದಾಯದವರಿಗೂ ತಿಳಿವಳಿಕೆ ಹೇಳಿದ್ದಾರೆ.
ಗ್ರಾಮಸ್ಥರ ವಿಚಾರಣೆ ನಡೆಸಿದ್ದು ಸಣ್ಣವಿಚಾರಕ್ಕೆ ಗಲಾಟೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ದೂರು ನೀಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಹಿತಕರ ಘಟನೆ ಮರುಕಳಿಸದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ ಎಂದು ಚನ್ನಣ್ಣನವರ್ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಡಿವೈಎಸ್‌ಪಿ ಬಿ.ಎಸ್. ಮೋಹನ್‌ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಎಸ್‌ಐ ವಿ. ಅಂಜನ್‌ಕುಮಾರ್ ಮತ್ತಿತರರು ಇದ್ದರು.