

ಮುಂಬೈ: ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ, ಭಾರತ ರತ್ನ ಪುರಸ್ಕೃತ ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವು ಇದೀಗ ಪಂಚಭೂತಗಳಲ್ಲಿ ಲೀನವಾಗಿದೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸರ್ಕಾರದ ಸಕಲ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಶಿವಾಜಿ ಪಾರ್ಕ್ಗೆ ಭೇಟಿ ನೀಡಿ, ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಸ್ಥರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.
ಇನ್ನು ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನವನ್ನು ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಪಡೆದರು.
ಅಲ್ಲದೆ ಈಶ ಫೌಂಡೇಷನ್ನ ಸದ್ಗುರು, ಶ್ರೀಶ್ರೀ ರವಿಶಂಕರ್ ಗುರೂಜಿ ಸೇರಿ ಸಿನಿಮಾ, ರಾಜಕೀಯ, ಕ್ರೀಡೆ, ಉದ್ಯಮ ಸೇರಿ ಹಲವಾರು ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.