

Morimoto : ಇತ್ತೀಚಿನ ದಿನಗಳಲ್ಲಿ ವರ್ಷಕ್ಕೆ 10 ಲಕ್ಷ ರೂಪಾಯಿ ಸಂಪಾದನೆ ಮಾಡುವುದು ಕೂಡ ತುಂಬಾ ಕಷ್ಟ. ಚೆನ್ನಾಗಿ ಓದಿ ದೊಡ್ಡ ಕಂಪನಿಗೆ ಸೇರಿದರೆ 20 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಬಹುದು. ಆ ಕೆಲಸಗಳಲ್ಲಿಯೂ ಸಹ ನೀವು ಪ್ರತಿದಿನ ಗಂಟೆಗಟ್ಟಲೆ ಒತ್ತಡದ ವಾತಾವರಣದಲ್ಲಿ ದುಡಿಯಬೇಕಾಗುತ್ತದೆ. ಆದರೆ, ಜಪಾನಿನ ವ್ಯಕ್ತಿಯೊಬ್ಬ ಏನೂ ಮಾಡದೆ ವರ್ಷಕ್ಕೆ 69 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ ಮತ್ತು ಈಗಾಗಲೇ ಆತ ಕೋಟ್ಯಧಿಪತಿಯಾಗಿದ್ದಾನೆ. ಕೇಳಲು ಇದು ಆಶ್ಚರ್ಯ ಎನಿಸಿದರೂ ಇದುವೇ ನಿಜ ಸಂಗತಿ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಲ್ಲಿರುವ ವ್ಯಕ್ತಿಯ ಹೆಸರು ಮೊರಿಮೊಟೊ. ಈತ "ರೆಂಟ್ ಎ ಡು-ನಥಿಂಗ್ ಗೈ" ಎಂದೇ ಖ್ಯಾತಿಯಾಗಿದ್ದಾನೆ. ಯಾರಿಗಾದರೂ ತಮಗೊಬ್ಬ ಜತೆಗಾರ ಬೇಕೆನಿಸಿದರೆ, ಮೊರಿಮೊಟೊಗೆ ಹಣ ಪಾವತಿಸಿ ಆತನನ್ನು ಕರೆಯಬಹುದು. ಇದುವರೆಗೂ ಈತನಿಗೆ ತುಂಬಾ ವಿಚಿತ್ರ ಕರೆಗಳೆಲ್ಲ ಬಂದಿವೆ.
ಕೆಲವರು ಏಕಾಂಗಿಯಾಗಿ ತಮ್ಮ ಕೋಣೆಯನ್ನು ಸ್ವಚ್ಛಗೊಳಿಸುವಾಗ ವಿಡಿಯೋ ಕಾಲ್ ಮಾಡಿ ಜತೆಗಿರುವಂತೆ ಕೇಳುತ್ತಾರೆ. ಇನ್ನು ಕೆಲವರು ಮ್ಯಾರಥಾನ್ ವೇಳೆ ಅಂತಿಮ ಗೆರೆಯಲ್ಲಿ ಕಾಯಲು ಹೇಳುತ್ತಾರೆ. ಒಮ್ಮೆಯಂತೂ ಒಬ್ಬ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ ನೀಡುವಾಗ ತನ್ನ ಮುಂದೆ ಒಂದು ಕೆಫೆಯಲ್ಲಿ ಕುಳಿತುಕೊಳ್ಳಲು ಕೇಳಿದ್ದಳಂತೆ. ಮೊರಿಮೊಟೊ ಅಂತಹ ವಿಚಿತ್ರ ಕೆಲಸಗಳಿಂದಲೇ ಬಹಳ ಜನಪ್ರಿಯರಾಗಿದ್ದಾರೆ. ಸದ್ಯ ವರ್ಷಕ್ಕೆ 1,000ಕ್ಕೂ ಅಧಿಕ ಕರೆಗಳು ಬರುತ್ತಿವೆ.
ಆರಂಭದಲ್ಲಿ ಎರಡರಿಂದ ಮೂರು ಗಂಟೆಗಳ ಸಮಯಕ್ಕೆ 5,400 ರಿಂದ 16,200 ರೂ.ಗಳವರೆಗೆ ಮೊರೊಮೊಟೊ ಶುಲ್ಕ ವಿಧಿಸುತ್ತಿದ್ದ. ಆದರೆ, ಇದೀಗ "ನಿಮ್ಮ ಇಚ್ಛೆಯಂತೆ ಪಾವತಿಸಿ" ಎಂಬ ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ಅದರ ಪ್ರಕಾರ ಗ್ರಾಹಕರು ತಮಗೆ ಬೇಕಾದಷ್ಟನ್ನು ಪಾವತಿ ಮಾಡಬಹುದು. ಈ ವಿಧಾನವು ಕೆಲಸ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬ ಸಸ್ಪೆನ್ಸ್ ನನಗೆ ತುಂಬಾ ಇಷ್ಟ ಎಂದು ಮೊರಿಮೊಟೊ ಹೇಳಿದ್ದಾರೆ.
ಸಾಮಾನ್ಯವಾಗಿ ನಾಚಿಕೆ ಸ್ವಭಾವದ ಮತ್ತು ಹೆಚ್ಚು ಮಾತನಾಡಲು ಇಷ್ಟಪಡದ ಜನರು ಮೊರಿಮೊಟೊನ ಶಾಂತ ಉಪಸ್ಥಿತಿಯನ್ನು ತುಂಬಾ ಆರಾಮದಾಯಕವೆಂದು ಕಂಡುಕೊಳ್ಳುತ್ತಾರೆ. ಆಶ್ಚರ್ಯಕರ ಸಂಗತಿ ಏನೆಂದರೆ, ಮೊರಿಮೊಟೊ ತನ್ನ ಕ್ಲೈಂಟ್‌ಗಳೊಂದಿಗೆ ಹೆಚ್ಚು ಮಾತನಾಡಬೇಕಾಗಿಲ್ಲ ಮತ್ತು ಅವರನ್ನು ಮನರಂಜಿಸಬೇಕಾಗಿಲ್ಲ. ಸುಮ್ಮನೇ ಜತೆಗಿದ್ದರೆ ಸಾಕು.
ತನ್ನ ಕೆಲಸದ ಬಗ್ಗೆ ಮಾತನಾಡಿರುವ ಮೊರಿಮೊಟೊ ಈ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಗ್ರಾಹಕರನ್ನು ಭೇಟಿಯಾಗುವುದು ಅವರ ಕಥೆಗಳನ್ನು ಕೇಳುವುದು ಮತ್ತು ಹೊಸ ಸ್ಥಳಗಳನ್ನು ನೋಡುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಮೊರಿಮೊಟೊ ಕತೆ ಕೇಳಿದರೆ ಇದು ನಿಜಕ್ಕೂ ವಿಚಿತ್ರವಾಗಿದೆ ಅನಿಸುತ್ತದೆ. ಏನನ್ನೂ ಮಾಡದೆ ಹಣ ಸಂಪಾದಿಸುವ ಈ ವ್ಯಕ್ತಿ ನಿಜವಾದ ಪ್ರತಿಭೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)