

ನವದೆಹಲಿ: ಮಹಾರಾಷ್ಟ್ರದಲ್ಲಿ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 32 ಲಕ್ಷ ಮತದಾರರು ಸೇರ್ಪಡೆಯಾಗಿದ್ದರೆ, ಲೋಕಸಭೆ ಚುನಾವಣೆಯ ನಂತರ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಮಹಾರಾಷ್ಟ್ರದಲ್ಲಿ ಕಳೆದ ನವೆಂಬರ್ನಲ್ಲಿ ನಡೆದ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಲು ನಾವು ಇಲ್ಲಿಗೆ ಬಂದಿದ್ದೇವೆ. ಚುನಾವಣೆ ಕುರಿತು ಒಂದಿಷ್ಟು ಮಾಹಿತಿ ತರಲಿದ್ದೇವೆ.ನಾವು ಮತದಾನ ಹಾಗೂ ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ್ದೇವೆ. ಚುನಾವಣೆಯಲ್ಲಿ ಹಲವು ಅಕ್ರಮಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ.
2019 ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯ ನಡುವೆ 32 ಲಕ್ಷ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಲೋಕಸಭೆ ಚುನಾವಣೆಯ ನಂತರ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಈ 39 ಲಕ್ಷ ಮತದಾರರು ಯಾರೆಂಬುದು ನಮ್ಮ ಪ್ರಶ್ನೆ. ನಾವು ಆಳವಾಗಿ ಪರಿಶೀಲಿಸಿದಾಗ ಎಪಿಕ್ ನಂಬರ್ ಹಿಮಾಚಲ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬರ ವೋಟರ್ ಐಡಿ ಒಂದೇ ಆಗಿದೆ. ಚುನಾವಣೆಯ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮತದಾರರನ್ನು ಸೃಷ್ಟಿಸಲಾಗಿದೆ. ಈ ಸಂಬಂಧ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೆ, ಯಾವುದೇ ತನಿಖೆಯನ್ನು ಕೈಗೊಂಡಿಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗವು, ರಾಜಕೀಯ ಪಕ್ಷಗಳನ್ನು ಆದ್ಯತೆಯ ಪಾಲುದಾರರು ಎಂದು ಇಸಿಐ ಪರಿಗಣಿಸುತ್ತದೆ. ಸಹಜವಾಗಿ ಮತದಾರರು ಕೂಡ ಪ್ರಧಾನರಾಗಿದ್ದಾರೆ ಮತ್ತು ರಾಜಕೀಯ ಪಕ್ಷಗಳಿಂದ ಬರುವ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಆಯೋಗ ಗೌರವಿಸುತ್ತದೆ. ದೇಶದಾದ್ಯಂತ ಏಕರೂಪವಾಗಿ ಅಳವಡಿಸಿಕೊಂಡಿರುವ ಸಂಪೂರ್ಣ ವಾಸ್ತವಿಕ ಮತ್ತು ಕಾರ್ಯವಿಧಾನ ಸಂಪೂರ್ಣ ಮಾಹಿತಿಯೊಂದಿಗೆ ಆಯೋಗವು ಲಿಖಿತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಟ್ವೀಟ್ನಲ್ಲಿ ಪೋಸ್ಟ್ ಮಾಡಿದೆ.