

ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬರುವ ಕಳವಳಕಾರಿ ವಿದ್ಯಮಾನ ಮುಂದುವರಿದಿದ್ದು ಶನಿವಾರ ಒಂದೇ ದಿನ ನಾನಾ ವಿಮಾನಯಾನ ಸಂಸ್ಥೆಗಳ 30ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆಯನ್ನು ಎದುರಿಸಿದವು.
ಈ ಹುಸಿ ಕರೆಗಳಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಯಿತು. ಶನಿವಾರದ ಪ್ರಕರಣ ನಂತರ ವಾರದಲ್ಲಿ ದಾಖಲಾದ ಇಂಥ ಪ್ರಕರಣಗಳ ಸಂಖ್ಯೆ 70ಕ್ಕೆ ಏರಿದಂತಾಗಿದೆ. ಬಾಂಬ್ ಬೆದರಿಕೆ ಕರೆಗಳ ಕಾರಣದಿಂದ ಭದ್ರತಾ ವ್ಯವಸ್ಥೆ ವಿಚಾರದಲ್ಲಿ ಕಳವಳ ಉಂಟಾಗಿದೆ. ದೇಶೀಯ ಏರ್ಲೈನ್ಸ್ಗಳ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ 30ಕ್ಕೂ ಅಧಿಕ ವಿಮಾನಗಳಿಗೆ ಶನಿವಾರ ಬಾಂಬ್ ಬೆದರಿಕೆ ಎದುರಾಯಿತು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕರೆಗಳು ಹರಿದು ಬಂದವು. ಕನಿಷ್ಠ ಒಂದು ವಿಮಾನದ ಶೌಚಗೃಹದಲ್ಲಿ ಒಂದು ನೋಟ್ ಸಿಕ್ಕಿದ್ದು ವಿಮಾನದಲ್ಲಿ ಬಾಂಬ್ ಇದೆ ಎಂದು ಅದರಲ್ಲಿ ಬರೆಯಲಾಗಿತ್ತು.
ಶುಕ್ರವಾರ, ದೆಹಲಿಯಿಂದ ಲಂಡನ್ಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ ಸ್ಫೋಟ ಬೆದರಿಕೆ ಬಂದ ಕಾರಣ ಅದನ್ನು ಜರ್ಮನಿಯ ಫ್ರಾಂಕ್ಫರ್ಟ್ಗೆ ಡೈವರ್ಟ್ ಮಾಡಲಾಗಿತ್ತು. ನಂತರ ಅದು ಲಂಡನ್ಗೆ ಹೊರಟಿತು. ದುಬೈ-ಜೈಪುರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ, ಬಾಂಬ್ ಬೆದರಿಕೆಯಿಂದಾಗಿ ವಿಳಂಬವಾಗಿ ಹೊರಟಿತು. ಜೈಪುರದಿಂದ ಬೆಳಿಗ್ಗೆ 6.10ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನ, ಸಮಗ್ರ ಭದ್ರತಾ ಪರಿಶೀಲನೆ ನಂತರ ಬೆಳಿಗ್ಗೆ 7.45ಕ್ಕೆ ದುಬೈಗೆ ಹೊರಟಿತು.
ಬೆಂಗಳೂರು - ಮುಂಬೈ ವಿಮಾನ: ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ತೆರಳಲಿದ್ದ ಆಕಾಶ ಏರ್ನ ವಿಮಾನ ಹೊರಡುವ ಸ್ವಲ್ಪವೇ ಹೊತ್ತಿಗೆ ಬೆದರಿಕೆ ಕರೆ ಬಂದಿದ್ದರಿಂದ ಸಮಗ್ರವಾಗಿ ಪರಿಶೀಲಿಸಿದಾಗ ಯಾವುದೇ ಆಕ್ಷೇಪಾರ್ಹ ವಸ್ತುಗಳು ಕಂಡುಬಾರದ್ದರಿಂದ ಎನ್ಒಸಿ ನೀಡಲಾಯಿತು. ಹಲವು ಗಂಟೆ ವಿಳಂಬದ ನಂತರ ವಿಮಾನ ಮುಂಬೈಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಕರೆಗೆ ₹3 ಕೋಟಿ ನಷ್ಟ: ವಿಮಾನಗಳಿಗೆ ಬರುವ ಹುಸಿ ಬಾಂಬ್ ಕರೆಗಳು ಕೇವಲ ಭದ್ರತಾ ಕಳವಳದ ವಿಷಯವಾಗಿ ಉಳಿದಿಲ್ಲ. ಅವು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತವೆ. ವಿಮಾನಗಳಿಗೆ ಬರುವ ಇಂಥ ಪ್ರತಿ ಕರೆಯಿಂದಾಗಿ ಸಂಬಂಧಪಟ್ಟ ಏರ್ಲೈನ್ಸ್ಗಳಿಗೆ ಸರಾಸರಿ ಸುಮಾರು 3 ಕೋಟಿ ರೂ.ನಷ್ಟ ಸಂಭವಿಸುತ್ತದೆ.
ನಿಯಮ ಪಾಲನೆ: ಅಕ್ಟೋಬರ್ 19ರಂದು ಕಾರ್ಯಾಚರಿಸುತ್ತಿದ್ದ ನಮ್ಮ ಕೆಲವು ವಿಮಾನ ಗಳಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಆಕಾಶ ಏರ್ ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷತೆ ಮತ್ತು ಭದ್ರತೆ ನಿಯಮಗಳ ಅನ್ವಯ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.