

ಪ್ಯಾರಿಸ್/ನವದೆಹಲಿ: ಕರೊನಾ ಸೋಂಕಿನ ಕಾರಣಕ್ಕೆ ಜಗತ್ತಿನಾದ್ಯಂತ ಬರೋಬ್ಬರಿ 300 ಕೋಟಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಕರೊನಾ ವೈರಸ್ COIVID19 ಸೋಂಕು ಹೋಗಲಾಡಿಸಲು ಬಹುತೇಕ 70 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಫ್ಪಿ ಡೇಟಾ ವರದಿ ಹೇಳಿದೆ. ಈ ನಡುವೆ, ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ 649ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 13ಕ್ಕೇರಿದೆ.
ಅರ್ಜೆಂಟೀನಾ, ಬ್ರಿಟನ್, ಫ್ರಾನ್ಸ್, ಇಂಡಿಯಾ, ಇಟಲಿ, ಅಮೆರಿಕ ಸೇರಿ ಬಹುತೇಕ ರಾಷ್ಟ್ರಗಳು ಕಡ್ಡಾಯ ಲಾಕ್ಡೌನ್ ಘೋಷಿಸಿವೆ. ಇತರೆ ಕೆಲವು ರಾಷ್ಟ್ರಗಳಲ್ಲಿ ಸರ್ಕಾರಗಳು ಕರ್ಫ್ಯೂ, ಕ್ವಾರಂಟೈನ್, #SocialDistancing ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿವೆ. ಸಂಪೂರ್ಣ ಲಾಕ್ಡೌನ್ ಘೋಷಿಸಿದ ರಾಷ್ಟ್ರಗಳ ಪಟ್ಟಿಗೆ ಬುಧವಾರ ಪನಾಮಾವೂ ಸೇರಿಕೊಂಢಿದೆ. ದಕ್ಷಿಣ ಆಫ್ರಿಕಾದಲ್ಲಿ ಇಂದಿನಿಂದ 21 ದಿನ ಲಾಕ್ಡೌನ್ ಘೋಷಣೇಯಾಗಿದೆ. ಬಹುತೇಕ ರಾಷ್ಟ್ರಗಳಲ್ಲಿ ಇನ್ನೂ ಹೊರಗೆ ಹೋಗಿ ಕೆಲಸ ಮಾಡಲು ಮತ್ತು ದಿನಸಿ ಮತ್ತು ಇತರೆ ಅಗತ್ಯವಸ್ತುಗಳನ್ನು ಖರೀದಿಸುವುದು ಸಾಧ್ಯವಾಗಿದೆ. ಹಾಗೆಯೇ ವೈದ್ಯಕೀಯ ನೆರವು ಪಡೆಯುವುದಕ್ಕೂ ಸಾಧ್ಯವಿದೆ.
ಇರಾನ್, ಜರ್ಮನಿ, ಕೆನಡಾ ಸೇರಿ ಏಳು ರಾಷ್ಟ್ರಗಳಲ್ಲಿ ಒಟ್ಟು 416 ದಶಲಕ್ಷ ಜನಸಂಖ್ಯೆ ಇದ್ದು, ಇಲ್ಲಿ ಎಲ್ಲರನ್ನೂ ಮನೆಯಲ್ಲೇ ಉಳಿದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ. ರಷ್ಯಾದಲ್ಲಿ ಮುಂದಿನ ವಾರ ನಾನ್-ವರ್ಕಿಂಗ್ ವೀಕ್ ಎಂದು ಘೋಷಿಸಲಾಗಿದೆ. ಚಿಲಿ, ಈಜಿಪ್ಟ್, ಐವರಿಕೋಸ್ಟ್, ಸರ್ಬಿಯಾ ಸೇರಿ 18 ರಾಷ್ಟ್ರಗಳಲ್ಲಿ ಒಟ್ಟು 300 ದಶಲಕ್ಷ ಜನಸಂಖ್ಯೆ ಇದ್ದು ಈ ರಾಷ್ಟ್ರಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಈಕ್ವಿಡೋರ್ನಲ್ಲಿ ಕಠಿಣ ಕರ್ಫ್ಯೂ ಜಾರಿಯಲ್ಲಿದ್ದು, ಜನ ಕಡ್ಡಾಯವಾಗಿ ಬೆಳಗ್ಗೆ 5ರಿಂದ ಅಪರಾಹ್ನ 2 ಗಂಟೆ ತನಕ ಮನೆಯಲ್ಲೇ ಇರಬೇಕು.
ಭಾರತದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ಗುರುವಾರ ಬೆಳಗ್ಗೆ 649ಕ್ಕೆ ಏರಿಕೆಯಾಗಿದೆ. ಈ ಪೈಕಿ 593 ಆ್ಯಕ್ಟಿವ್ ಕೇಸ್ಗಳಾದರೆ, 42 ಆರೋಗ್ಯ ಸುಧಾರಿಸಿದವರು/ಬಿಡುಗಡೆಹೊಂದಿದವರು. ಇನ್ನು 13 ಜನ ಮೃತಪಟ್ಟವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
(ಏಜೆನ್ಸೀಸ್)