

ನವದೆಹಲಿ: ಕರೊನಾ ವೈರಸ್ ಸೋಂಕು ದೇಶದೆಲ್ಲೆಡೆ ವ್ಯಾಪಿಸುತ್ತಿರುವಂತೆ ಮುಂಜಾಗ್ರತಾ ಕ್ರಮದ ಭಾಗವಾಗಿ ಆಸ್ಪತ್ರೆ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಇರುವ ಆಸ್ಪತ್ರೆಗಳನ್ನೇ ಕರೊನಾ ಚಿಕಿತ್ಸೆಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡುವ ಕೆಲಸ ಹಂತ ಹಂತವಾಗಿ ನಡೆಯುತ್ತಿದೆ. ಇದರ ಜತೆಗೆ, ಅದು ಸಾಕಾಗದ ಕಾರಣ ಶಾಲೆಗಳು, ಕಾಲೇಜುಗಳು ಕೂಡ ಕರೊನಾ ಐಸೋಲೇಷನ್ ಯೂನಿಟ್ಸ್ ಆಗಿ ಬದಲಾಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ರೈಲ್ವೆ ಬೋಗಿಗಳು!
COVID19 ವಿರುದ್ಧದ ಸುದೀರ್ಘ ಹೋರಾಟಕ್ಕೆ ಸರ್ಕಾರ ಅಣಿಯಾಗಿದ್ದು, ಗ್ರಾಮೀಣ ಪ್ರದೇಶ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ರೈಲ್ವೆ ಬೋಗಿಗಳನ್ನೆ ಐಸೋಲೇಷನ್ ಘಟಕಗಳನ್ನಾಗಿ ಪರಿವರ್ತಿಸುವ ಕೆಲಸಕ್ಕೆ ಮುನ್ನುಡಿ ಬರೆದಿದೆ. ಕಪೂರ್ತಲಾದ ರೈಲ್ ಕೋಚ್ ಫ್ಯಾಕ್ಟರಿ ಇದರ ಹೊಣೆಗಾರಿಕೆಯನ್ನು ನೀಡಲಾಗಿದ್ದು ಎಲ್ಎಚ್ಬಿ ಕೋಚ್ಗಳು ಇದೀಗ ಐಸೋಲೇಷನ್ ಕೋಚ್ಗಳಾಗಿ ಬದಲಾಗುತ್ತಿವೆ. ಈ ಕೋಚ್ಗಳು ಎಸಿ ರಹಿತವಾಗಿ ಇರಲಿದೆ. ಎಸಿ ಇದ್ದರೆ ಅದರ ಸ್ವಚ್ಛತೆಯನ್ನು ಕಾಪಾಡುವುದು ತುಸು ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಅದು ಪ್ರಾಯೋಗಿಕವೂ ಅಲ್ಲ ಎಂಬುದನ್ನು ಪರಿಣತರು ಹೇಳುತ್ತಿದ್ದಾರೆ. ಹೀಗಾಗಿ ಎಲ್ಎಚ್ಬಿ ಕೋಚ್ ನಲ್ಲಿ ಅಂತರ, ಸ್ವಚ್ಛತೆ, ಆರೋಗ್ಯದ ಮೇಲೆ ನಿಗಾವಹಿಸಲು ಬೇಕಾದ ಮಾನಿಟರ್, ಎಕ್ಸ್ಕ್ಲೂಸಿವ್ ಬಾತ್ ರೂಮ್ಗಳೂ ಇರಲಿವೆ. ಇದರ ವಿನ್ಯಾಸ ಅಂತಿಮಗೊಂಡರೆ, ಸರ್ಕಾರ ಅನುಮತಿ ನೀಡುತ್ತಲೇ ಐಸೋಲೇಷನ್ ಯೂನಿಟ್ ಸಿದ್ಧಪಡಿಸುವ ಕೆಲಸ ಭರದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದೇ ರೀತಿ ಚೆನ್ನೈನ ಇಂಟೆಗ್ರೆಲ್ ಕೋಚ್ ಫ್ಯಾಕ್ಟರಿಗೆ ವೆಂಟಿಲೇಟರ್ ತಯಾರಿಸುವ ಹೊಣೆಗಾರಿಕೆ ನೀಡಲಾಗಿದೆ. ಇದು ರೈಲ್ವೆಗೆ ಸಂಬಂಧಿಸದ ಕೆಲಸವಾದರೂ ಸವಾಲಾಗಿ ಸ್ವೀಕರಿಸಿರುವ ಚೆನ್ನೈ ಐಸಿಎಫ್, ವೆಂಟಿಲೇಟರ್ನ ಪ್ರೊಟೋಟೈಪ್ ಮಾಡಲು ಆರಂಭಿಸಿದೆ. ಭಾರತದಲ್ಲಿ ವೆಂಟಿಲೇಟರ್ಗಳ ಕೊರತೆ ಇರುವ ಕಾರಣ, ಈಗಿನ ಮಾನದಂಡವನ್ನು ಗಮನದಲ್ಲಿ ಇರಿಸಿಕೊಂಡು ಅದನ್ನು ಸಿದ್ಧಪಡಿಸಿಕೊಡುವ ಪ್ರಯತ್ನದಲ್ಲಿದೆ.
ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ರೈಲ್ವೆ ಬೋರ್ಡ್ ಚೇರ್ಮನ್ ವಿ.ಕೆ.ಯಾದವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಸಿದ್ಧತೆಗಳೆಲ್ಲವೂ ಮುಂಜಾಗ್ರತಾ ಕ್ರಮವಾಗಿದ್ದು, ತುರ್ತು ಅಗತ್ಯ ಉಂಟಾದಲ್ಲಿ ಉಪಯೋಗಕ್ಕೆ ಬರುವ ರೀತಿಯಲ್ಲಿ ನಡೆಯುತ್ತಿದೆ. 21 ದಿನಗಳ ಲಾಕ್ಡೌನ್ ಸಂದರ್ಭದಲ್ಲಿ ಉಂಟಾಗಬಹುದಾದ ಸಂಭಾವ್ಯ ಸನ್ನಿವೇಶವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ತಯಾರಿ ನಡೆದಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)