ಜನೋತ್ಸವಕ್ಕೆ 2 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ

01385396-3453-4991-869b-7a6b65a64a22
Published on

ದೊಡ್ಡಬಳ್ಳಾಪುರ: ಬರುವ ಸೆ. 8ರಂದು ನಡೆಯಲಿರುವ ಜನೋತ್ಸವ ಕುರಿತಂತೆ ಪ್ರತಿ ತಾಲೂಕಿನ ಮುಖಂಡರ ಸಲಹೆ, ಸೂಚನೆ ಪಡೆಯಲಾಗಿದೆ. ಜನೋತ್ಸವಕ್ಕೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಉದ್ದೇಶವಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ನಗರ ಹೊರವಲಯದ ತಿಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ಸೆ.8ರಂದು ಆಯೋಜಿಸಿರುವ ಬಿಜೆಪಿ ಜನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಸಲುವಾಗಿ ಗ್ರಾಮಮಟ್ಟದ ಪ್ರತಿ ಬೂತ್, ಹೋಬಳಿ, ತಾಲೂಕುಮಟ್ಟದಲ್ಲಿ ಸಭೆ ನಡೆಸಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯದ ಜನರಿಗೆ ಸಂದೇಶ ರವಾನಿಸಬೇಕು ಎಂದು ಹೇಳಿದರು.


ಜನೋತ್ಸವ ಯಶಸ್ವಿಗೊಳಿಸುವ ಕುರಿತು ಚರ್ಚಿಸಲು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಜಿಲ್ಲಾ ತಾಲೂಕು ಮುಖಂಡರ ಪೂರ್ವಸಿದ್ಧತೆ ಸಭೆ ನಡೆಸಲಾಗಿದೆ ಎಂದರು.

ಜಿಲ್ಲಾ ಕೇಂದ್ರ ಚರ್ಚೆಯಲ್ಲಿದೆ: ಜಿಲ್ಲಾ ಕೇಂದ್ರ ಘೋಷಣೆ ಸಂಬಂಧ ದೊಡ್ಡಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲಾ ಕೇಂದ್ರದ ಕುರಿತು ಸಚಿವ ಸುಧಾಕರ್ ಹೇಳಿಕೆ ನೀಡಿರಬಹುದು. ಆದರೆ, ಆ ಬಗ್ಗೆ ಎಲ್ಲೂ ಚರ್ಚೆ ನಡೆದಿಲ್ಲ. ಸರ್ಕಾರದಲ್ಲಿ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರ ಆಗಬೇಕೇ ಅಥವಾ ದೇವನಹಳ್ಳಿ ೋಷಣೆಯಾಗಬೇಕೆ ಎಂಬುದನ್ನು ತೀರ್ಮಾನಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದರು.


ಪ್ರತಿಪಕ್ಷಗಳ ಟೀಕೆ ಸಾಮಾನ್ಯ: ಸಾವರ್ಕರ್ ಪೋಟೋ ಹಿಡಿದು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್ ಪ್ರತಿಪಕ್ಷವಾಗಿ ಟೀಕೆ ಮಾಡುವುದು ಅವರ ಕೆಲಸ. ಅವರು ಹೇಳೋದನ್ನು ಅವರು ಹೇಳ್ತಾರೆ, ನಾವು ಹೇಳೋದನ್ನು ನಾವು ಹೇಳ್ತೀವಿ, ಯಾರು ಏನೇ ಹೇಳಿದರೂ ಅಂತಿಮ ತೀರ್ಮಾನ ಜನರಿಗೆ ಸೇರಿರುತ್ತದೆ. ಮುಂದಿನ ಚುನಾವಣೆಯಲ್ಲಿ ಜನರೇ ಭವಿಷ್ಯ ಬರೆಯಲಿದ್ದಾರೆ ಎಂದು ಹೇಳಿದರು. ಸೆ.8ರಂದು ಜನೋತ್ಸವಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.


ಮಾವೇಶದಲ್ಲಿ ಉತ್ತರ: ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸೆ.8ರಂದು ನಡೆಯುವ ಜನೋತ್ಸವ ಸಮಾವೇಶ ಅವರ ಆರೋಪಗಳಿಗೆ ಉತ್ತರ ಆಗಲಿದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಮಂಡಿಸಲಾಗುತ್ತದೆ. ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಮಾವೇಶದಲ್ಲಿ ಜನಕ್ಕೆ ಸ್ಪಷ್ಟತೆ ಸಿಗಲಿದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಬುಧವಾರ ಬಿಜೆಪಿ ಜನೋತ್ಸವ ಸಮಾವೇಶ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಚಲವಾದಿ ನಾರಾಯಣಸ್ವಾಮಿ, ಎಂಪಿ ಮುನಿಸ್ವಾಮಿ, ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಲೀಲಾಮಹೇಶ್, ಧೀರಜ್ ಮುನಿರಾಜು, ನಗರಾಧ್ಯಕ್ಷ ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net