

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಸಂಜೆ ಭರ್ಜರಿ ಸಂಭ್ರಮ ಕಂಡು ಬಂದಿತು. ಎಲ್ಲರ ಕೊರಳಲ್ಲೂ ಹಸಿರು ಇಲ್ಲವೇ ಹಳದಿ ಶಾಲು, ಹಣೆಯಲ್ಲಿ ತಿಲಕ. ಎಲ್ಲರ ಮೊಗದಲ್ಲೂ ಒಂದು ರೀತಿಯ ಧನ್ಯತಾಭಾವ. ಇನ್ನೊಂದೆಡೆ ಕಣ್ಗಳಲ್ಲಿ ಅಪಾರ ನಿರೀಕ್ಷೆ. ಪ್ರಮುಖ ಧಾರ್ಮಿಕ ಪ್ರಕ್ರಿಯೆಯೊಂದಕ್ಕೆ ಸಾಕ್ಷಿಯಾಗಲಿದ್ದೇವೆ ಎಂಬ ಹೆಮ್ಮೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು 1,200ಕ್ಕೂ ಹೆಚ್ಚು ಯಾತ್ರಿಕರು ಹೊರಟ ಕಾರಣ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇಂತಹದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಕುಂಭ ಮೇಳಕ್ಕೆ ಹೊರಟವರ ಸಂಭ್ರಮ ಒಂದೆಡೆಯಾದರೆ ಅವರನ್ನು ಕಳಿಸಲು ಬಂದಿದ್ದ ಕುಟುಂಬದ ಸದಸ್ಯರಲ್ಲೂ ಒಂದು ರೀತಿಯ ಸಂತೋಷ.
ಬಿಜೆಪಿ ಹಾಗೂ ಹಿಂದುಪರ ಕಾರ್ಯಕರ್ತರು ಮಧ್ಯಾಹ್ನ 3ರಿಂದಲೇ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಯಾತ್ರಿಕರಿಗೆ ತಿಲಕವಿಟ್ಟು, ಕೇಸರಿ ಶಾಲು ಹೊದಿಸಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ರೈಲ್ವೆ ನಿಲ್ದಾಣದ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು.
ಶಿವಮೊಗ್ಗದಿಂದ ಪ್ರಯಾಗ್‌ರಾಜ್‌ಗೆ ಸಂಜೆ 4.40ಕ್ಕೆ ಹೊರಟ ವಿಶೇಷ ರೈಲಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಸಿರು ನಿಶಾನೆ ತೋರಿದರು. ಅದಕ್ಕೂ ಮುನ್ನ ಅವರು ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿ, ಇದೊಂದು ವಿಶೇಷ ಸಂದರ್ಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸಹಕಾರದಿಂದ ಶಿವಮೊಗ್ಗದಿಂದ ನೇರವಾಗಿ ಪ್ರಯೋಗ್‌ರಾಜ್‌ಗೆ ವಿಶೇಷ ರೈಲು ಒದಗಿಸಲಾಗಿದೆ. ನಿಮ್ಮೆಲ್ಲರ ಪ್ರಯಾಣ ಸುಖಕರವಾಗಿರಲಿ. ಕೊನೆಯ ನಿಲ್ದಾಣದಲ್ಲಿ ರೈಲು ಇಳಿಯುವ ಮುನ್ನ ಜಾಗ್ರತೆಯಿರಲಿ ಎಂದು ಕಿವಿಮಾತು ಹೇಳಿದರು.
ಅಗತ್ಯ ಮಾಹಿತಿ: ಎಲ್ಲ ಯಾತ್ರಾರ್ಥಿಗಳಿಗೂ ಮೈಕ್‌ನ ಮೂಲಕ ರೈಲ್ವೆ ನಿಲ್ದಾಣದ ಆವರಣದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿದ್ದು ವಿಶೇಷವಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು, ಸಂಗಮದಲ್ಲಿ ವಹಿಸಬೇಕಾದ ನಿಗಾ, ರೈಲು ಇಳಿಯುವ ಹಾಗೂ ಅಲ್ಲಿಂದ ಮರಳುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಯಾತ್ರಾರ್ಥಿಗಳು ಎಲ್ಲವನ್ನೂ ಗಮನವಿಟ್ಟು ಕೇಳಿ ಬಳಿಕ ಪ್ರಯಾಣ ಆರಂಭಿಸಿದರು.
ಸೆಲ್ಫಿ ಸಂಭ್ರಮ: ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ಸಂಭ್ರಮ ಮುಗಿಲು ಮುಟ್ಟಿತ್ತು. ಕೆಲವರು ತಮ್ಮ ಕುಟುಂಬದವರು, ಆತ್ಮೀಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರೆ ಅನೇಕರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರೊಂದಿಗೆ ಸೆಲ್ಫಿ ಮುಗಿಬಿದ್ದರು. ಬಿ.ವೈ.ರಾಘವೇಂದ್ರ ಪ್ರತಿ ಬೋಗಿಗೂ ತೆರಳಿ ಯಾತ್ರಾರ್ಥಿಗಳಿಗೆ ಹಸ್ತಲಾಘವ ನೀಡಿ, ಪ್ರಯಾಣಕ್ಕೆ ಶುಭಕೋರಿ ಬೀಳ್ಕೊಟ್ಟರು.