

ನವದೆಹಲಿ: ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹಾಗೂ ಶಾಹೀನ್ಬಾಗ್ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಕಿಚ್ಚು ಆರುತ್ತಿಲ್ಲ.
ಈ ಮಧ್ಯೆ ಇಂದು ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ಯೂನಿವರ್ಸಿಟಿಯಿಂದ ಸಂಸತ್ತಿನವರೆಗೆ ಸಿಎಎ ವಿರೋಧಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದರು.
ಆದರೆ ಮೆರವಣಿಗೆ ನಡೆಸಲು ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಯೋರ್ವ ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ದಾನೆ. ಗಂಡುಮಕ್ಕಳು, ಹೆಣ್ಣುಮಕ್ಕಳು ಎಂದು ನೋಡದೆ ದೇಹದ ಖಾಸಗಿ ಭಾಗಗಳಿಗೆ ಹೊಡೆದಿದ್ದಾರೆ ಎಂದು ಹೇಳಿದ್ದಾನೆ.
ಪೊಲೀಸರು ನಮ್ಮನ್ನು ಪಕ್ಕಕ್ಕೆ ತಳ್ಳುತ್ತಿದ್ದರು. ನಿಮ್ಮ ವಿರುದ್ಧ ಯಾವುದೇ ದಂಡ ಪ್ರಯೋಗ ಮಾಡುವುದಿಲ್ಲ ಎಂದು ಮೊದಲು ಹೇಳಿದ್ದರು. ಆದರೆ ನಾವು ಗುಂಪಿನಲ್ಲಿ ಸಿಕ್ಕಿಕೊಂಡಿರುವಾಗ ನಮಗೆ ಹೊಡೆದಿದ್ದಾರೆ. ಅದೂ ಕೂಡ ಬೆಲ್ಟ್ನ ಕೆಳಭಾಗಕ್ಕೆ, ಖಾಸಗಿ ಅಂಗಗಳ ಮೇಲೆ, ಕಾಲಿನ ಮೇಲೆ ಹೊಡೆತ ಬಿದ್ದಿದೆ. ಈ ವೇಳೆ ಅಲ್ಲಿಯೇ ಇದ್ದ ಹುಡುಗಿಯೋರ್ವಳಿಗೂ ಕೂಡ ಖಾಸಗಿ ಭಾಗದ ಮೇಲೆ ಹೊಡೆದಿದ್ದಾರೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದು ಪೊಲೀಸರು ಮಾಡಿದ ತಪ್ಪು ಎಂದು ಹೇಳಿದ್ದಾನೆ.
ಸ್ಥಳದಲ್ಲಿ ವಿಪರೀತ ಜನಸಂದಣಿ ಇತ್ತು. ನಮಗೆಲ್ಲ ಉಸಿರುಗಟ್ಟಿ, ವಾಕರಿಕೆ ಬರುವಂತೆ ಇತ್ತು. ಎರಡು ಬಾರಿ ನಾನು ಮೂರ್ಛೆ ಕಳೆದುಕೊಂಡೆ ಎಂದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ವಿದ್ಯಾರ್ಥಿನಿ ತಿಳಿಸಿದ್ದಾರೆ.
ಇಂದಿನ ಪ್ರತಿಭಟನೆ ವೇಳೆ ಸುಮಾರು 10 ವಿದ್ಯಾರ್ಥಿಗಳ ಖಾಸಗಿ ಅಂಗಗಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ 10 ದಿನಗಳ ಹಿಂದೆ ಜಾಮಿಯಾ ನಗರದ ಬಳಿ ಪ್ರತಿಭಟನಾಕಾರರ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದ. ಅದೇ ಕಾರಣಕ್ಕೆ ಇಂದು ಮಧ್ಯಾಹ್ನ ನಡೆಯಬೇಕಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಅಲ್ಲದೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)