

ಅಜ್ಜಂಪುರ: ಒಂದು ಗ್ರಾಮ ಅಥವಾ ಜಿಲ್ಲೆಗೆ ಖ್ಯಾತಿ ತರಬೇಕಾದರೆ ಎಲ್ಲರೂ ಶ್ರಮ ಪಡಬೇಕು. ಅದರಲ್ಲಿಯೂ ಶಿಕ್ಷಕ ಮಹತ್ವದ ಪಾತ್ರ ವಹಿಸುತ್ತಾನೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಮುಖ್ಯೋಪಾಧ್ಯಾಯರ ಸಂಘ, ದೈಹಿಕ ಶಿಕ್ಷಕರ ಸಂಘದಿಂದ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಶಾಲಾ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಹೆಚ್ಚು ಲಿತಾಂಶ ತರಲಿ ಎಂದು ಶ್ರಮವಹಿಸಿ ತಾಲೂಕಿನ ಶಿಕ್ಷಕರು ಪಾಠ ಮಾಡುತ್ತಾರೆ. ಈ ಕಾರಣದಿಂದ ನಮ್ಮ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಹೆಚ್ಚಿನ ಫಲಿತಾಂಶ ದಾಖಲಿಸುತ್ತಿದೆ ಎಂದರು.
ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಮಾತನಾಡಿ, ಎಲ್ಲ ಶಿಕ್ಷಕರು ಶ್ರಮ ವಹಿಸಿ, ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡಿದ್ದರಿಂದಲೇ ಪರೀಕ್ಷೆಯಲ್ಲಿ ಹೆಚ್ಚು ಲಿತಾಂಶ ಬರುತ್ತಿದೆ. ಸರ್ಕಾರಗಳು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ತಾರತಮ್ಯ ಮಾಡುತ್ತಿವೆ. ಪ್ರೌಢ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಆಗುತ್ತಿಲ್ಲ. ಇಂತಹ ಕಾರ್ಯಕ್ರಮ ಆಯೋಜಿಸಿದರೆ ಶಿಕ್ಷಕರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಮತ್ತು ಶಿಕ್ಷಕರ ಸಮಸ್ಯೆಗಳು ಅರಿವಿಗೆ ಬರುತ್ತವೆ ಎಂದರು.
ಬಿಇಒ ಗೋವಿಂದಪ್ಪ ಮಾತನಾಡಿ, ಎಲ್ಲ ಶಿಕ್ಷಕರು ಶಾಲೆಯಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಿದಾಗ ನಾವು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆಯಬಹುದು. ಇದಕ್ಕಾಗಿ ಮಕ್ಕಳಿಗೆ ಓದಿನ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಅಜ್ಜಂಪುರ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಉತ್ತಮ ಕೆಲಸ ಮಾಡುವ ಮತ್ತು ಹೆಚ್ಚಿನ ಲಿಂತಾಶ ನೀಡುವ ಹಂಬಲ ನಮಗೂ ಇದೆ. ಇದಕ್ಕೆ ಅಧಿಕಾರಿ ವರ್ಗದವರು ಹೆಚ್ಚಿನ ಮಾರ್ಗದರ್ಶನ ಮತ್ತು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಎನ್‌ಜಿಒ ಅಧ್ಯಕ್ಷ ಜಿ.ಎನ್.ಈಶ್ವರಪ್ಪ, ವೆಂಕಟೇಶ್, ಜಗದೀಶ್, ಪ್ರಕಾಶ್, ಸತೀಶ್, ವೆಂಕಟೇಶ್, ಮೆಡಿಕಲ್ ಶಿವಾನಂದ್ ಇತರರಿದ್ದರು.