

ಬೆಂಗಳೂರು: ದೇಶದಲ್ಲಿ ಜಾರಿಯಲ್ಲಿರುವ ಮೂರನೇ ಹಂತದ ಲಾಕ್ಡೌನ್ ಮೇ 17ಕ್ಕೆ ಮುಕ್ತಾಯವಾಗಲಿದ್ದು, ಮುಂದಿನ ಹಂತದಲ್ಲಿ ಹಲವು ವಿನಾಯಿತಿಗಳನ್ನು ನೀಡಬೇಕು ಎಂದು ಕರ್ನಾಟಕ ಸಹಿತ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಸಾರಿಗೆ, ಮದುವೆಗಳಲ್ಲಿ ಹೆಚ್ಚು ಜನ ಭಾಗವಹಿಸಲು ಅವಕಾಶ ನೀಡುವುದು, ಹೋಟೆಲ್ಗಳನ್ನು ತೆರೆಯುವುದು ಸೇರಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವಂತೆ ಲಾಕ್ಡೌನ್ ನಿಯಮಗಳಲ್ಲಿ ಇನ್ನಷ್ಟು ಸಡಿಲಿಕೆಗೆ ಅವಕಾಶ ನೀಡಬೇಕೆಂದು ಕರ್ನಾಟಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಪರೆನ್ಸ್ನಲ್ಲಿ ನೀಡಿರುವ ಸೂಚನೆ ಅನ್ವಯ ರಾಜ್ಯಗಳು ಈ ಪ್ರಸ್ತಾವನೆ ಸಲ್ಲಿಸಿವೆ. ಈಗಿರುವ ಮಾರ್ಗಸೂಚಿ ಅನ್ವಯ ವ್ಯಾಪಾರ, ವಹಿವಾಟು ನಡೆಸುವುದು ಕಷ್ಟ. ಇತ್ತೀಚಿನ ಲಾಕ್ಡೌನ್ ಸಡಿಲಿಕೆಯಿಂದ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಉದ್ಯೋಗ, ಆರ್ಥಿಕ ಚಟುವಟಿಕೆ ವೃದ್ಧಿಯ ಹಿನ್ನೆಲೆಯಲ್ಲಿ ಇನ್ನಷ್ಟು ಸಡಿಲಿಕೆ ಅವಶ್ಯವಿದೆ ಎಂಬುದನ್ನು ರಾಜ್ಯ ಸರ್ಕಾರ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಿದೆ.
ಬಸ್ ಪ್ರಯಾಣಕ್ಕೆ ಈಗಿರುವ ಮಿತಿಯನ್ನು ಸಡಿಲಿಸಬೇಕು. ಮದುವೆ ಮತ್ತಿತರ ಸಮಾರಂಭಗಳಲ್ಲಿ 50 ಜನಕ್ಕಿರುವ ಮಿತಿಯನ್ನು ಹೆಚ್ಚಿಸಬೇಕು. ಕಂಟೈನ್ವೆುಂಟ್ ಪ್ರದೇಶಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡಬೇಕು. ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕು ಎಂಬ ಅಂಶಗಳು ಪ್ರಸ್ತಾವನೆಯಲ್ಲಿ ಸೇರಿವೆ ಎನ್ನಲಾಗಿದೆ.
ಇದನ್ನೂ ಓದಿ ಕೆಂಪು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಕೊಡಿ
ರಾಜ್ಯದ ಬೇಡಿಕೆ ಏನು?: ಹೊಟೆಲ್, ರೆಸ್ಟೋರೆಂಟ್, ಗಾಲ್ಪ್, ಕ್ಲಬ್, ಜಿಮ್ಳನ್ನು ತೆರೆಯಲು ಅನುಮತಿ ನೀಡಬೇಕು. ಅಂತರ ಜಿಲ್ಲೆ ಹಾಗೂ ರಾಜ್ಯಗಳ ಸಾರಿಗೆ ಅನುಮತಿ ನೀಡಬೇಕು. ಧಾರ್ವಿುಕ ಕೇಂದ್ರ, ಸಭೆ -ಸಮಾರಂಭಗಳನ್ನು ಈ ತಿಂಗಳ ಅಂತ್ಯದ ವರೆಗೆ ಮುಂದೂಡಬೇಕು ಎಂದು ರಾಜ್ಯ ಹೇಳಿದೆ.
ಸಿನಿಮಾ, ಮಾಲ್ಗಳನ್ನು ಸದ್ಯಕ್ಕೆ ತೆರೆಯುವುದು ಬೇಡ, ಶಾಲೆಗಳನ್ನು ಜೂನ್ ನಂತರ ತೆರೆಯಬಹುದೆಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಹಸಿರು, ಹಳದಿ ವಲಯಗಳಂತೆ ಕೆಂಪು ವಲಯದಲ್ಲೂ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಬೇಕು. ಕಂಟೈನ್ಮೆಂಟ್ ವಲಯದಲ್ಲಿ ಮಾತ್ರ ಚಟುವಟಿಕೆ ಸ್ಥಗಿತಗೊಳಿಸಿ, ಉಳಿದ ಭಾಗಗಳಿಗೆ ವಿನಾಯಿತಿ ನೀಡಬೇಕು. ರೆಡ್ ಝೆೊನ್ನಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಎಂಬುದು ರಾಜ್ಯದ ಪ್ರಮುಖ ಬೇಡಿಕೆಯಾಗಿದೆ.
ಕೇರಳಕ್ಕೆ ಪ್ರವಾಸೋದ್ಯಮ ಚಿಂತೆ
ಲಾಕ್ಡೌನ್ ಸಂಪೂರ್ಣ ತೆರವುಗೊಳಿಸಲು ಕೇರಳ ಮನವಿ ಮಾಡಿದೆ. ಪ್ರವಾಸೋದ್ಯಮ ರಾಜ್ಯದ ಮುಖ್ಯ ಆದಾಯ ಮೂಲವಾಗಿರುವ ಕಾರಣ, ಸ್ಥಳೀಯ ರೈಲು, ವಿಮಾನಗಳು, ಮೆಟ್ರೋ ಆರಂಭ ಮಾಡಬೇಕು. ಹೋಟೆಲ್ ಮತ್ತು ರೆಸ್ಟೋರಂಟ್ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಕೇಳಲಾಗಿದೆ.
ಲಾಕ್ಡೌನ್ ಮುಂದುವರಿಕೆಗೆ ಕೆಲ ರಾಜ್ಯಗಳ ಒಲವು
ಮಹಾರಾಷ್ಟ್ರ, ಬಿಹಾರ, ಜಾರ್ಖಂಡ, ಪಂಜಾಬ್ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ಲಾಕ್ಡೌನ್ ಮುಂದುವರಿಕೆ ಮಾಡುವಂತೆ ಕೇಳಿವೆ. ಒಂದು ವೇಳೆ ಕೇಂದ್ರ ಸರ್ಕಾರ ಲಾಕ್ಡೌನ್ ತೆರವುಗೊಳಿಸಿದರೂ, ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಕೆ ಮಾಡುವುದಾಗಿ ಅವು ತಿಳಿಸಿವೆ. ಮೇ ತಿಂಗಳ ಅಂತ್ಯದವರೆಗೆ ಲಾಕ್ಡೌನ್ ವಿಸ್ತರಿಸದಿದ್ದರೆ ಕರೊನಾ ನಿಯಂತ್ರಣ ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿವೆ. ಮಹಾರಾಷ್ಟ್ರದಲ್ಲಿ 1,289 ಕಂಟೈನ್ಮೆಂಟ್ ಪ್ರದೇಶಗಳಿವೆ. 3 ಲಕ್ಷಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಪಿಎಫ್ ಪಾವತಿ ವಿಳಂಬಕ್ಕೆ ದಂಡವಿಲ್ಲ
ನವದೆಹಲಿ: ಉದ್ಯೋಗದಾತರು ಭರಿಸುವ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಮೊತ್ತ ಜಮಾ ಮಾಡಲು ವಿಳಂಬವಾದರೆ ಯಾವುದೇ ದಂಡ ವಿಧಿಸದಿರಲು ಇಪಿಎಫ್ಒ ನಿರ್ಧರಿಸಿದೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಪಿಎಫ್ಒ ಆಯುಕ್ತ ಸುನಿಲ್ ಬಾರ್ತ್ವಾಲ್ ಹೇಳಿದ್ದಾರೆ. ಇಪಿಎಫ್ ಯೋಜನೆ 1952ರ ಪ್ರಕಾರ ನಿಗದಿತ ಸಮಯದೊಳಗೆ ಉದ್ಯೋಗಿಗಳ ಪಿಎಫ್ ಮೊತ್ತ ಜಮಾ ಮಾಡಲು ಸಾಧ್ಯವಾಗದ ಉದ್ಯೋಗದಾತರಿಗೆ ದಂಡ ವಿಧಿಸಲಾಗುತ್ತದೆ.