ಈ ವರ್ಷ ವಾಡಿಕೆಗಿಂತ ಅಧಿಕ ಮಳೆ; ಜೂನ್- ಸೆಪ್ಟೆಂಬರ್ ಅವಧಿಯಲ್ಲಿ ಚುರುಕಾಗಲಿರುವ ಮಾನ್ಸೂನ್

ವಿಜಯವಾಣಿ (3)
Published on

ಬೆಂಗಳೂರು: ಪ್ರಸಕ್ತ ವರ್ಷದ ಮಾನ್ಸೂನ್​ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆ ನಿರೀಕ್ಷೆ ಇದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ 2025ನೇ ಸಾಲಿನ ಹವಾಮಾನ ಪರಿಸ್ಥಿತಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಪೂರ್ವ ಮುಂಗಾರಿನಲ್ಲಿ ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಆದರೆ, ಜೂನ್​ನಿಂದ ಸೆಪ್ಟೆಂಬರ್​ವರೆಗಿನ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳಲಿವೆ ಎಂದು ಅಧಿಕಾರಿಗಳು ವಿವರಿಸಿದರು. ಸೆಪ್ಟೆಂಬರ್ ನಂತರದ ಹಿಂಗಾರಿನಲ್ಲೂ ಈ ವರ್ಷ ವಾಡಿಕೆಯ ಮಳೆ ನಿರೀಕ್ಷಿಸಬಹುದು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಲಿದೆ. ಉಳಿದ ಇತರ ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನ ಇರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

ನೀರಿನ ಮಟ್ಟ: ರಾಜ್ಯದಲ್ಲಿನ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 422.11 ಟಿ.ಎಂ.ಸಿ ನೀರಿನ ಸಂಗ್ರಹಣೆಯಿದ್ದು, ಕಳೆದ ಸಾಲಿನ ಇದೇ ಸಮಯದಲ್ಲಿ 280.02 ಟಿ.ಎಂ.ಸಿ. ನೀರಿನ ಸಂಗ್ರಹಣೆ ಇತ್ತು. ಕೆಲವೊಂದು ಜಲಾಶಯಗಳಲ್ಲಿ ನೀರಿನ ಮಟ್ಟ ತೃಪ್ತಿಕರವಾಗಿ ಇಲ್ಲದೆ ಇರುವ ಬಗ್ಗೆ ಅತಂಕ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ನೀರಾವರಿಗಿಂತ (ಬೇಸಿಗೆ ಬೆಳೆಗಳು) ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಹೆಚ್ಚಿನ ತಾಪಮಾನವು ನೀರಿನ ನಷ್ಟಕ್ಕೆ ಕಾರಣ ವಾಗುತ್ತದೆಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡುಗಡೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸ್ತುತ ರಾಜ್ಯದ 12 ಜಿಲ್ಲೆಗಳ 115 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಬಾಡಿಗೆ ಟ್ಯಾಂಕರ್ ಮತ್ತು ಬೋರ್​ವೆಲ್​ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಸಮಸ್ಯೆಗಳ ಇತ್ಯರ್ಥಕ್ಕಾಗಿ ತ್ವರಿತ ಪರಿಹಾರ ತಂಡಗಳನ್ನು ನಿಯೋಜಿಸುವುದು. ಕುಡಿಯುವ ನೀರಿನ ಕೊರತೆಯ ಅಪಾಯದಲ್ಲಿರುವ ಪ್ರದೇಶಗಳನ್ನು ಗುರುತಿಸಿ ಮತ್ತು ಸಕಾಲಿಕ ತಗ್ಗಿಸುವಿಕೆಗಾಗಿ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಪ್ರಿಯಾಂಕ್ ಖರ್ಗೆ ಹಾಗೂ ಸಂಬಂಧಿತ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಲ ಜಿಲ್ಲೆಗಳಲ್ಲಿ ವರ್ಷದ ಹರ್ಷ

ಬೆಂಗಳೂರು: ಮಂಗಳೂರು, ಶಿವಮೊಗ್ಗ, ಹೊಸಪೇಟೆ ಸೇರಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯ ಸಿಂಚನ ವಾಗಿದೆ. ರಾಜ್ಯದಲ್ಲಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವ ನಡುವೆ ಅಲ್ಲಲ್ಲಿ ಮಳೆಯಾಗುತ್ತಿರು ವುದು ಕೊಂಚ ನಿರಾಳ ಮೂಡಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ, ತ್ಯಾಗರ್ತಿ, ಸೊರಬ, ತೀರ್ಥಹಳ್ಳಿ ತಾಲೂಕಿನ ಹಲವೆಡೆ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಭಾಗದಲ್ಲಿ ಗುರುವಾರ ಗುಡುಗು-ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ದ.ಕ. ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ, ನಾರಾವಿ, ಚಾರ್ಮಾಡಿ, ಸುತ್ತಮುತ್ತ ಗುರುವಾರ ಸಂಜೆ ಮಳೆಯಾಗಿದೆ. ಹರಪನಹಳ್ಳಿ ಪಟ್ಟಣದಲ್ಲಿ ಗುರುವಾರ ಸಂಜೆ ಆಲಿಕಲ್ಲು ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net