ದಾವಣಗೆರೆ ಜಿಲ್ಲೆಯ ದಾಗಿನಕಟ್ಟೆ ಗ್ರಾಮದಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿದರು. ಜೆ.ಆರ್.ಷಣ್ಮುಖಪ್ಪ, ಕೆ.ಎಸ್.ಬಸವಂತಪ್ಪ, ತೇಜಸ್ವಿ ವಿ.ಪಟೇಲ್, ಎಸ್.ಜಿ.ಮಹೇಶ್ವರಪ್ಪ ಇತರರಿದ್ದರು.
ಕ್ಯಾನ್ಸರ್‌ಕಾರಕವಲ್ಲ ಎಂದು ದೃಢೀಕರಿಸಿದರೆ ಹೆಚ್ಚಲಿದೆ ಬೇಡಿಕೆ
ದಾವಣಗೆರೆ: ಅಡಕೆ ಬಗ್ಗೆ ಪರಿಣಾಮಕಾರಿ ಸಂಶೋಧನೆ ಅಗತ್ಯತೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ಕೊರಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾಗಿನಕಟ್ಟೆ ಗ್ರಾಮದಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆ ದೇಶದಲ್ಲಿಯೇ ಅತಿ ಹೆಚ್ಚು ಅಡಕೆ ಬೆಳೆಯುವ ಪ್ರದೇಶವಾಗಿದೆ. ಈ ಭಾಗದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅಡಕೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಸಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಡಕೆ ಕ್ಯಾನ್ಸರ್‌ಕಾರಕ ಎಂದು ಶ್ರೀಲಂಕಾದಲ್ಲಿ ನಡೆದ ಸಮಾವೇಶದಲ್ಲಿ ವಿಶ್ವಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ. ಇದರ ಜತೆಗೆ ತಂಬಾಕು ಸೇರಿಸಿ ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ನಾವೂ ಹೇಳುತ್ತಿದ್ದೇವೆ. ಅದರೆ ವಿಶ್ವಸಂಸ್ಥೆ, ಅಡಕೆಯನ್ನು ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ವರದಿ ಕೇಳುತ್ತಿದೆ ಎಂದು ತಿಳಿಸಿದರು.
7 ವರ್ಷ ಕಳೆದರೂ ಈ ಹಿಂದೆ ನಡೆಸಿದ್ದ ಸಂಶೋಧನಾ ವರದಿ ನೀಡಲು ಸಾಧ್ಯವಾಗಿಲ್ಲ. ಇದೀಗ ರೈತರ ಹಿತಾಸಕ್ತಿ ಗಮನದಲ್ಲಿರಿಸಿ ತ್ವರಿತ ವರದಿ ಸಲ್ಲಿಸಿದಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಎಂಬ ಅಭಿಪ್ರಾಯ ತಡೆಯಬಹುದು. ಅಡಕೆ ಜತೆಗೆ ತಂಬಾಕು ಹಾಕಿದರೆ ಮಾತ್ರ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂಬುದನ್ನು ದೃಢೀಕರಿಸಿದರೆ ಅಡಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಅಡಕೆ ದರ ಹೆಚ್ಚಿದಂತೆಲ್ಲ ವ್ಯಾಪಾರಿಗಳು ಇಲ್ಲದ ಪುಕಾರುಗಳನ್ನು ಹಬ್ಬಿಸಿ ದರ ಕುಸಿತಕ್ಕೆ ಕಾರಣರಾಗುತ್ತಿದ್ದಾರೆ. ಶತಮಾನಗಳಿಂದಲೂ ದೇಶದ ಜನ ಅಡಕೆ ಬಳಸುತ್ತಿದ್ದು, ಇದುವರೆಗೂ ಅಡಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿಲ್ಲ. ಸಂಸದರು ಈ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕುಗಳು ರೈತರಿಗೆ ಹೆಚ್ಚು ಸಾಲ ಸೌಲಭ್ಯ ನೀಡಿದರೆ ಅನುಕೂಲವಾಗಲಿದೆ. ಇದಕ್ಕೆ ನಬಾರ್ಡ್ ಹಣಕಾಸು ನೆರವಿನ ಅಗತ್ಯವಿದೆ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶೀಘ್ರವೇ ಬಗರ್‌ಹುಕುಂ ಸಮಿತಿಗಳನ್ನು ರಚಿಸಿ ಅರ್ಹ ಭೂ ರಹಿತರನ್ನು ಗುರುತಿಸಿ ಸಾಗುವಳಿ ಪತ್ರ ವಿತರಿಸಲಾಗುವುದು. ಸಾಗುವಳಿ ಪತ್ರ ಕೊಡಿಸುವುದಾಗಿ ಹೇಳಿ ಕೆಲ ಏಜೆಂಟರು ಬಡ ರೈತರಿಂದ 2 ರಿಂದ 5 ಲಕ್ಷ ರೂ.ವರೆಗೆ ಹಣ ಪಡೆಯುತ್ತಿರುವ ದೂರುಗಳಿವೆ. ಯಾರೂ ಸಹ ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ಹೇಳಿದರು.
ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜಿ.ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ.ಬಸಪ್ಪ, ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್ ಇದ್ದರು.