ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ

Midday Meals
Published on

ಬೆಂಗಳೂರು: ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಗೆ ಬಳಸುವ ‘ವಸ್ತುಗಳ ಖರೀದಿ ವೆಚ್ಚ’ ಹೆಚ್ಚಿಸಿದ್ದು, ಈ ಮೂಲಕ ಕೇಂದ್ರೀಯ ಪ್ರಾಯೋಜಿತ ಯೋಜನೆಯ ಅನುದಾನ ಏರಿಸಿದೆ. ಊಟ ತಯಾರಿಸಲು ಮುಖ್ಯವಾಗಿ ಬೇಕಾಗುವ ಬೇಳೆ, ತರಕಾರಿ, ಎಣ್ಣೆ ಹಾಗೂ ಇತರ ಪದಾರ್ಥಗಳು, ಇಂಧನ ಖರೀದಿಗೆ ಈ ಹಿಂದೆ ನಿಗದಿಪಡಿಸಿದ್ದ ದರಗಳನ್ನು ಹೆಚ್ಚಿಸಿದೆ. ಒಟ್ಟಾರೆ ದರ ಗಳಲ್ಲಿ ಶೇ.13.70 ಏರಿಸಿ ಆದೇಶಿಸಿದೆ. ದೇಶದ 10.24 ಲಕ್ಷ ಶಾಲೆಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಒಟ್ಟು 11.70 ಕೋಟಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಯಾರಿಗೆ, ಎಷ್ಟು ಹೆಚ್ಚು?: ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾಗುವ ಆಹಾರದ ತಯಾರಿಕೆಯ ವಸ್ತುಗಳ ವೆಚ್ಚ 5.45 ರಿಂದ 6.19 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ 8.17ರಿಂದ 9.29ರೂ.ಗೆ ಏರಿಸಲಾಗಿದೆ. ಈ ಬೆಲೆ ಏರಿಕೆ ಡಿ.1ರಿಂದ ಅನ್ವಯಿಸುವಂತೆ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬೆಲೆ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸಲಿದೆ. ಆದರೆ, ರಾಜ್ಯಗಳು ಇದರ ಹೊರತಾಗಿಯೂ ಹೆಚ್ಚುವರಿ ಮೊತ್ತ ಭರಿಸಲು ಅವಕಾಶವಿದೆ. ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಊಟ ನೀಡಲು ಈಗಾಗಲೇ ಹಲವು ರಾಜ್ಯಗಳು ಇಂಥ ಕ್ರಮಗಳನ್ನು ಕೈಗೊಂಡಿವೆ.

ಬೆಲೆ ನಿಗದಿ ಹೇಗೆ?: ಊಟ ತಯಾರಿಸಲು ಬೇಕಾಗುವ ವಸ್ತುಗಳ ಬೆಲೆ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ನಿಗದಿ ಮಾಡಲಾಗುತ್ತದೆ. ಇದಕ್ಕಾಗಿ ದೇಶದ 20 ರಾಜ್ಯಗಳ 600ಕ್ಕೂ ಅಧಿಕ ಹಳ್ಳಿಗಳಲ್ಲಿ ಈ ವಸ್ತುಗಳಿಗಿರುವ ದರ ಸಮೀಕ್ಷೆ ಮಾಡಿ ಕಾರ್ವಿುಕ ಇಲಾಖೆ ನೀಡಿರುವ ಗ್ರಾಹಕ ಬೆಲೆ ಸೂಚ್ಯಂಕದನ್ವಯ ದರಪಟ್ಟಿ ಸಿದ್ಧಪಡಿಸಲಾಗಿದೆ. 2023-24ರಿಂದ ಈ ಬೆಲೆ ಏರಿಕೆ ಮಾಡಿರಲಿಲ್ಲ. ಅಂತೆಯೇ, 2022- 23ನೇ ಸಾಲಿಗೆ ಹಣದುಬ್ಬರವು 6.45 ಆಗಿತ್ತು. ಮತ್ತು 2023-24ನೇ ಸಾಲಿಗೆ 6.74 ಆಗಿದೆ. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರವು 425.62 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಭರಿಸಲಿದೆ.

ಆಹಾರ ಧಾನ್ಯಗಳ ಪೂರೈಕೆ: ಊಟ ತಯಾರಿಕೆಗೆ ಬೇಕಾಗುವ ವೆಚ್ಚ ಭರಿಸುವ ಜತೆಗೆ, ಕೇಂದ್ರ ಸರ್ಕಾರ ಈ ಯೋಜನೆಗೆ 26 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ಇದರ ವೆಚ್ಚವೇ ಅಂದಾಜು 9,000 ಕೋಟಿ ರೂ. ಆಗಿದ್ದು, ಭಾರತೀಯ ಆಹಾರ ನಿಗಮದ ಗೋದಾಮಿನಿಂದ ಶಾಲೆವರೆಗೆ ಆಹಾರ ಧಾನ್ಯ ಸಾಗಿಸಲು ತಗಲುವ ವೆಚ್ಚ ಕೂಡ ಕೇಂದ್ರವೇ ಪಾವತಿಸುತ್ತದೆ. ಆಹಾರ ಧಾನ್ಯಗಳ ವೆಚ್ಚ ಸೇರಿ ಅಂಗನವಾಡಿ, ಪ್ರಾಥಮಿಕ ಶಾಲಾ ಮಕ್ಕಳ ಒಂದು ಹೊತ್ತಿನ ಊಟಕ್ಕೆ 11.54 ರೂ., ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಊಟಕ್ಕೆ 16.74 ರೂ. ವೆಚ್ಚ ಮಾಡಿದಂತಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ 10ನೇ ತರಗತಿಗೂ ವಿಸ್ತರಣೆ: ಕೇಂದ್ರ ಸರ್ಕಾರ 1-8ನೇ ತರಗತಿ ಮಕ್ಕಳಿಗೆ ಮಾತ್ರವೇ ಈ ಯೋಜನೆ ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವು ಇದನ್ನು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಿದೆ. ರಾಜ್ಯದಲ್ಲಿ 48,465 ಸರ್ಕಾರಿ ಶಾಲೆಗಳು, 6,842 ಅನುದಾನಿತ ಸೇರಿ ಒಟ್ಟು 55,307 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಒಟ್ಟು 55 ಲಕ್ಷಕ್ಕೂ ಅಧಿಕ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net