ವಿಲ್​ನತ್ತ ಹಿರಿಯರ ಚಿತ್ತ; ಕರೊನಾತಂಕ, ಜೀವಭಯ

will
Published on

ಜಗನ್ ರಮೇಶ್ ಬೆಂಗಳೂರು

ಜೀವನದ ಸಂಧ್ಯಾಕಾಲದಲ್ಲಿ ಮಕ್ಕಳಿಗೆ ಆಸ್ತಿ ಹಂಚಿಕೆ ಬಗ್ಗೆ ಯೋಚಿಸುವ ಪಾಲಕರು, ಮರಣಾನಂತರ ಒಳಜಗಳಗಳು ಉಂಟಾಗದಿರಲಿ ಎಂಬ ಕಾರಣದಿಂದ ವಿಲ್ ಮಾಡಿಸಿಡುತ್ತಾರೆ. ಕರೊನಾ ನಂತರದ ದಿನಗಳಲ್ಲಿ ಹಲವರ ಮನಸಿನಲ್ಲಿ ಜೀವಭಯದೊಂದಿಗೆ ಸೋಂಕಿನಿಂದ ಅಕಾಲಿಕ ಮರಣ ಹೊಂದಿದರೆ ಆಸ್ತಿಯ ಗತಿಯೇನು ಎಂಬ ಆತಂಕವೂ ಕಾಡತೊಡಗಿದೆ. ಇದೇ ಕಾರಣಕ್ಕೆ ವಿಲ್ ಬರೆಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

60 ದಾಟಿದ ಹಿರಿಯ ನಾಗರಿಕರು ವಿಲ್ ಮಾಡಿಸುವುದು ಸರ್ವೆಸಾಮಾನ್ಯ. ಆರೋಗ್ಯ ಸಮಸ್ಯೆವುಳ್ಳ ಉಳ್ಳವರಷ್ಟೇ ಅಲ್ಲದೆ, 45-50 ವರ್ಷದ ವ್ಯಕ್ತಿಗಳೂ ವಿಲ್ ಮಾಡಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನುತ್ತಾರೆ ವಕೀಲ ಮನೋಹರ ಜೀರಿಗೆ. ರಾಜ್ಯ ನೋಟರಿ ಸಂಘದ ಕಾರ್ಯದರ್ಶಿಯೂ ಅಗಿರುವ ಇವರು, ತಮಗಾದ ಕೆಲ ಅನುಭವಗಳನ್ನೂ ವಿವರಿಸಿದ್ದಾರೆ.

ಸಂಬಂಧಿಕರ ಸಾವು ತಂದ ಭಯ: ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ನೆಲೆಸಿರುವ ಮೈಸೂರು ಮೂಲದ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ವಿಲ್ ಮಾಡಿಸುವ ಕುರಿತು ವಿಚಾರಿಸಿದರು. ಸಂಬಂಧಿಕರಲ್ಲೊಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ. ಆರೋಗ್ಯವಾಗಿಯೇ ಇದ್ದ ಅವರ ಅಕಾಲಿಕ ಸಾವಿನಿಂದ ನನಗೂ ಜೀವಭಯ ಶುರುವಾಗಿದೆ. ಯಾವಾಗ, ಏನು ಎಂಬುದನ್ನೇ ಹೇಳಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಆದ್ದರಿಂದ ಆಸ್ತಿಯನ್ನು ಮಕ್ಕಳಿಗೆ ಹಂಚಿ ವಿಲ್ ಮಾಡಿಸಲು ನಿರ್ಧರಿಸಿದ್ದು, ಕರೊನಾ ಹಾವಳಿ ಕಡಿಮೆಯಾದ ಕೂಡಲೇ ಕಚೇರಿಗೆ ಬಂದು ರ್ಚಚಿಸುವುದಾಗಿ ಹೇಳಿದ್ದಾರೆ.

ಮಕ್ಕಳ ನಡುವೆ ಜಗಳವಾಗುವ ಆತಂಕ: ಬೆಂಗಳೂರಿನ ಉದ್ಯಮಿಯೊಬ್ಬರು ಕಚೇರಿಗೆ ಬಂದು ವಿಲ್ ಮಾಡಿಸಿಕೊಂಡು ಹೋಗಿದ್ದಾರೆ. ಕರೊನಾ ಸೋಂಕಿನಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಾಧ್ಯಮಗಳಲ್ಲಿ ಸುದ್ದಿ ನೋಡಿದಷ್ಟೂ ಆತಂಕವಾಗುತ್ತಿದೆ. ಕೊಂಚ ದೊಡ್ಡ ಪ್ರಮಾಣದ ಆಸ್ತಿಯೇ ಇದೆ. ಅದು ಸೂಕ್ತವಾಗಿ ಹಂಚಿಕೆಯಾಗದಿದ್ದರೆ ಮುಂದೆ ಮಕ್ಕಳ ನಡುವೆಯೇ ವ್ಯಾಜ್ಯ ಉಂಟಾಗಬಹುದೆಂಬ ಕಾರಣ ನೀಡಿ ವಿಲ್ ಮಾಡಿಸಿದ್ದಾರೆ.

ಸೋಂಕಿನಿಂದ ಗುಣವಾದ ಬಳಿಕ ಚಿಂತನೆ: ವಿಲ್ ಮಾಡಿಸುವ ಚಿಂತನೆ ಇರಲಿಲ್ಲ. ಇತ್ತೀಚೆಗಷ್ಟೇ ಕರೊನಾ ಸೋಂಕು ತಗುಲಿ, ಚಿಕಿತ್ಸೆ ಪಡೆದು ಗುಣವಾಗಿದ್ದೇನೆ. ವೃತ್ತಿಯಲ್ಲಿ ಪಶುವೈದ್ಯನಾಗಿರುವ ನಾನು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೆಯಾದರೂ ಸೋಂಕು ತಗುಲಿತ್ತು. ಇಂಥ ಆತಂಕದ ಪರಿಸ್ಥಿತಿಯಲ್ಲಿ ವಿಲ್ ಬರೆಸುವುದು ಸೂಕ್ತವೆನಿಸಿದೆ ಎನ್ನುವುದು ಹಿರಿಯ ನಾಗರಿಕರೊಬ್ಬರ ಅನಿಸಿಕೆ.

ವಿಲ್ ಎಂದರೇನು, ಮಹತ್ವವೇನು?:  ಯಾವುದೇ ವ್ಯಕ್ತಿ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯನ್ನು ತನ್ನಿಚ್ಛೆಯಂತೆ ಹಂಚಿಕೆ ಮಾಡಿ ಬರೆಸುವ ಪತ್ರಕ್ಕೆ ವಿಲ್ ಎನ್ನುತ್ತಾರೆ. ಆಸ್ತಿಯ ಒಡೆಯ ಬರೆಸುವ ವಿಲ್, ಆತನ ಮರಣಾನಂತರ ಚಾಲ್ತಿಗೆ ಬರಲಿದೆ. ಆ ವ್ಯಕ್ತಿ ಬದುಕಿರುವವರೆಗೆ ಎಷ್ಟು ಬಾರಿ ಬೇಕಿದ್ದರೂ ವಿಲ್ ಬದಲಿಸಬಹುದು. ಅಂತಿಮವಾಗಿ ಬರೆದ ವಿಲ್ ಮಾನ್ಯತೆ ಹೊಂದುತ್ತದೆ. ಒಂದು ಬಿಳಿ ಹಾಳೆ ಮೇಲೆ ಬರೆದು ಸಹಿ ಹಾಕಿದರೂ ಅದಕ್ಕೆ ಮಾನ್ಯತೆ ಇದೆ. ಆದರೆ, ಭವಿಷ್ಯದಲ್ಲಿ ಆಸ್ತಿ ಹಂಚಿಕೊಂಡವರ ನಡುವೆ ಯಾವುದೇ ತಕರಾರು ಉಂಟಾಗಬಾರದೆಂದರೆ, ವಿಲ್​ಗಳನ್ನು ನೋಂದಣಿ ಮಾಡಿಸುವುದು ಉತ್ತಮ. ವಿಲ್ ಬರೆಸಿದ ವ್ಯಕ್ತಿಯ ಮರಣ ನಂತರ ಆ ಆಸ್ತಿ ಯಾರ ಪಾಲಿಗೆ ಹಂಚಿಕೆಯಾಗಿದೆಯೋ ಅವರಿಗೆ ಸೇರಲಿದೆ.

ಕಾನೂನು ತಜ್ಞರ ಸಲಹೆ: ಕರೊನಾ ಆತಂಕದಿಂದ ಸಾವು ಹತ್ತಿರ ಬಂದೇಬಿಟ್ಟಿದೆ ಎಂದು ಆತುರದಲ್ಲಿ ವಿಲ್ ಮಾಡಿಸುವುದು ಸೂಕ್ತವಲ್ಲ. ದಾನಪತ್ರ (ಗಿಫ್ಟ್​ಡೀಡ್) ಅಥವಾ ವಿಲ್​ಗಳನ್ನು ಮಾಡಿಸುವ ಮುನ್ನ ಕಾನೂನು ತಜ್ಞರಿಂದ ಅಗತ್ಯ ಸಲಹೆಗಳನ್ನು ಪಡೆಯಬೇಕು ಎನ್ನುತ್ತಾರೆ ಹೈಕೊರ್ಟ್ ವಕೀಲ ಎನ್.ಪಿ.ಅಮೃತೇಶ್. ಆಸ್ತಿ ಪಡೆದ ಬಳಿಕ ಮಕ್ಕಳೇ ತಂದೆ ತಾಯಿಯನ್ನು ಹೊರ ಹಾಕಿರುವ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಹಿರಿಯರು ವಿಲ್ ಮಾಡಿಸುವಾಗ, ಜೀವಿತಾವಧಿವರೆಗೂ ತಮಗೆ ತೊಂದರೆಯಾಗದ ರೀತಿ ಎಚ್ಚರ ವಹಿಸಬೇಕು. ಒಂದು ವೇಳೆ ಆಸ್ತಿ ಪಡೆದ ಮಕ್ಕಳಿಂದ ಯಾವುದೇ ರೀತಿಯ ತೊಂದರೆ ಎದುರಾಗುವಂತಿದ್ದರೆ, ವಿಲ್ ಅಥವಾ ಗಿಫ್ಟ್ ಡೀಡ್​ಗಳಲ್ಲಿ ಹಿರಿಯ ನಾಗರಿಕರ ಸಂರಕ್ಷಣೆ ಕಾಯ್ದೆಯನ್ನೂ ಉಲ್ಲೇಖಿಸಬಹುದು. ತಂದೆ ಮೃತಪಟ್ಟ ಬಳಿಕ ತಾಯಿಯನ್ನು ಆಕೆ ಮೃತಪಡುವವರೆಗೆ ನೋಡಿಕೊಳ್ಳುವ ಜವಾಬ್ದಾರಿಯೂ ಮಕ್ಕಳದೆ ಆಗಿರುತ್ತದೆ ಎಂಬ ಷರತ್ತುಗಳನ್ನು ವಿಲ್​ನಲ್ಲಿ ಉಲ್ಲೇಖಿಸುವುದು ಉತ್ತಮವೆಂಬುದು ಅಮೃತೇಶ್ ಸಲಹೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net