

ರಾಣೆಬೆನ್ನೂರ: ನಿತ್ಯವೂ ಒಂದು ಪತ್ರಿಕೆ ಓದಿದರೆ ಹಾಗೂ ಅದರಲ್ಲಿನ ವಿಷಯ ಸಂಗ್ರಹಿಸಿಟ್ಟರೆ ಅದೇ ದೊಡ್ಡ ಗ್ರಂಥಾಲಯ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಬರುವ ಮಾಹಿತಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನರ್ತಕಿ ಹೋಟೆಲ್ ಮಾಲೀಕ ಚೇತನ ನಾಜರೆ ಹೇಳಿದರು.
ತಾಲೂಕಿನ ಮಾಕನೂರ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.
ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ಓದಿರುವ ಎಷ್ಟೋ ಜನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನ ಪಡೆದಿರುವ ಉದಾಹರಣೆಗಳಿವೆ. ಅಲ್ಲದೆ ಕೆೆಎಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯುವವರಿಗೂ ಈ ಪತ್ರಿಕೆ ಉಪಯುಕ್ತವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ವಿದ್ಯಾರ್ಥಿ ಮಿತ್ರ ಪತ್ರಿಕೆ ಓದುವ ಮೂಲಕ ಅಕ್ಷರ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ ಕೂಡ ಹೆಚ್ಚಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮುಸ್ತುಫಾ ಡಿ.ಎಸ್. ಮಾತನಾಡಿ, ಪತ್ರಿಕೆ ಎಂಬುದು ಜ್ಞಾನ ಸಂಪಾದಿಸುವ ಆಯುಧ ಇದ್ದಂತೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉನ್ನತ ಅಧಿಕಾರಕ್ಕೇರಲು ಅನುಕೂಲವಾಗುತ್ತದೆ ಎಂದರು.
ವಸತಿ ನಿಲಯದ ಪಾಲಕ ವೆಂಕಟೇಶ ಎಂ.ಟಿ., ಶಿಕ್ಷಕರಾದ ಬಸವರಾಜ ಜ್ಯೋತಿ, ಅಬ್ದುಲ್ ಮುಲ್ಲಾ, ಗಂಗಾಧರ ಕೆ., ಪ್ರತಿಭಾ ಹಡಗಲಿ, ನೂರ ಫಾತಿಮಾ, ಶೃತಿ ಲೆಕ್ಕಪ್ಪಗೌಡ್ರ, ಪ್ರವೀಣ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.