

Pope Francis : ರೋಮನ್ ಕ್ಯಾಥೋಲಿಕ್ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್ (88) ಸೋಮವಾರ ಬೆಳಗ್ಗೆ ನಿಧನರಾದರು. ಹಲವು ಸುಧಾರಣೆಗಳನ್ನು ತಂದಿದ್ದ ಧೀಮಂತ ಫ್ರಾನ್ಸಿಸ್ ಭಗವಂತನ ಮತ್ತು ಚರ್ಚ್‌ನ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿದ್ದರು.
ತಮ್ಮ ನಿಲುವುಗಳ ವೈವಿಧ್ಯತೆಯಿಂದಾಗಿ ಇಡೀ ಜಗತ್ತಿನಾದ್ಯಂತ ತುಂಬಾ ಪ್ರಸಿದ್ಧಿ ಪಡೆದಿದ್ದರು. ರಾಷ್ಟ್ರೀಯ ಮತ್ತು ಧಾರ್ಮಿಕ ಗಡಿಗಳನ್ನು ಮೀರಿ ಜನರ ಮನಸ್ಸಿನಲ್ಲಿ ಪೋಪ್ ಫ್ರಾನ್ಸಿಸ್ ಮನೆ ಮಾಡಲು ಅವರಿಗೆ ಸಹಾಯ ಮಾಡಿದ್ದು, ಯಾವಾಗಲೂ ಅವರು ಎತ್ತಿಹಿಡಿಯುತ್ತಿದ್ದ ಮಾನವೀಯತೆಯ ಮೌಲ್ಯಗಳು. ಹಣ, ಸಂಪತ್ತು ಮತ್ತು ಸುಖಭೋಗಗಳು ಪೋಪ್ ಫ್ರಾನ್ಸಿಸ್ ಮೇಲೆ ಎಂದಿಗೂ ಪ್ರಭಾವ ಬೀರಲಿಲ್ಲ. ಸರಳ ಮತ್ತು ಮಾನವೀಯ ಜೀವನದನ್ನೇ ಉಸಿರಾಗಿಸಿಕೊಂಡಿದ್ದರು.
ಸಾಮಾನ್ಯ ಜನರ ಅಗತ್ಯಗಳಿಗಾಗಿ ಧ್ವನಿ ಎತ್ತಿದವರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಪೋಪ್, ವಿಶ್ವ ಶಾಂತಿಯ ಮಹಾನ್ ಪ್ರತಿಪಾದಕರೂ ಆಗಿದ್ದರು. ಅವರ ವಿಶಿಷ್ಟ ಗುಣವೆಂದರೆ ಅದು ಪರೋಪಕಾರ. ವಿಶ್ವದ ಹೆಚ್ಚಿನ ದೇಶಗಳಲ್ಲಿ ಆಸ್ತಿಗಳನ್ನು ಹೊಂದಿರುವ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿ, ಪೋಪ್ ಅಡಿಯಲ್ಲಿ ಫ್ರಾನ್ಸಿಸ್ ಅವರು ಶತಕೋಟಿ ಡಾಲರ್‌ಗಳ ಆಸ್ತಿಯನ್ನು ಸಹ ನಿರ್ವಹಿಸುತ್ತಿದ್ದರು. ಆದರೆ, ಚರ್ಚ್ ಅನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವತ್ತ ಗಮನಹರಿಸಿದ್ದ ಪೋಪ್ ಫ್ರಾನ್ಸಿಸ್, ತಮ್ಮ ವೈಯಕ್ತಿಕ ಜೀವನದಲ್ಲಿ ಎಂದಿಗೂ ಹಣಕಾಸಿನ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿಲ್ಲ.
ಪೋಪ್ ಫ್ರಾನ್ಸಿಸ್ ಅವರಿಗೆ ತಿಂಗಳಿಗೆ 32,000 ಡಾಲರ್ (ಸುಮಾರು 27 ಲಕ್ಷ ರೂಪಾಯಿ) ಸ್ಟೈಫಂಡ್ ನೀಡಲಾಗುತ್ತಿತ್ತು. ಆದರೆ, 2013 ರಲ್ಲಿ ಜಾಗತಿಕ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಪೋಪ್ ಫ್ರಾನ್ಸಿಸ್ ಅವರು ತಮಗೆ ಸಿಗಬಹುದಾಗಿದ್ದ ಹಣವನ್ನು ಬಡವರಿಗಾಗಿ ಕೆಲಸ ಮಾಡುವ ಟ್ರಸ್ಟ್‌ಗೆ ದಾನ ಮಾಡಿದರು. ಪೋಪ್ ಆಗುವ ಮೊದಲೇ ಅವರು ಚರ್ಚ್‌ನಿಂದ ಅಥವಾ ಅಧಿಕೃತ ಸ್ಥಾನಗಳಿಂದ ಯಾವುದೇ ಸಂಭಾವನೆಯನ್ನು ಪಡೆಯಲಿಲ್ಲ.
ಸಂಪತ್ತು ಮತ್ತು ಐಷಾರಾಮಿ ಜೀವನದಿಂದ ದೂರವಿರುವ ಪೋಪ್ ಅವರ ನಡೆ ಅಲ್ಲಿಗೆ ಮುಗಿಯುವುದಿಲ್ಲ. 2017ರಲ್ಲಿ, ಪೋಪ್ ಫ್ರಾನ್ಸಿಸ್ ಅವರಿಗೆ ಕಂಪನಿಯು ವಿಶೇಷ ಆವೃತ್ತಿಯ ಲ್ಯಾಂಬೋರ್ಘಿನಿ ಹರಿಕೇನ್ ಕಾರನ್ನು ಉಡುಗೊರೆಯಾಗಿ ನೀಡಿತು. ಅದರ ಬೆಲೆ ಎರಡು ಲಕ್ಷ ಡಾಲರ್ (ಸುಮಾರು 1.7 ಕೋಟಿ ರೂ.). ಅವರು ಪಡೆದ ಕಾರನ್ನು ಓಡಿಸಲು ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ಕಾರನ್ನು ಹರಾಜಿನಲ್ಲಿ ಇಡಲಾಯಿತು ಮತ್ತು ಅದರಿಂದ ಬಂದ ಆದಾಯವನ್ನು ಬಡತನ ನಿರ್ಮೂಲನೆಗೆ ದಾನ ಮಾಡಲಾಯಿತು. ಹೀಗೆ ಜೀವನದುದ್ದಕ್ಕೂ ಪೋಪ್ ಫ್ರಾನ್ಸಿಸ್ ಅವರು ಪರೋಪಕಾರಿಯಾಗಿ ಬದುಕಿದರು.
* ಪೋಪ್ ಫ್ರಾನ್ಸಿಸ್ ಅವರ ಪೂರ್ವದ ಹೆಸರು ಜಾರ್ಜ್ ಮಾರಿಯೊ ಬರ್ಗೆಗ್ಲಿಯೋ. ಅವರು 1936ರ ಡಿಸೆಂಬರ್ 17ರಂದು ಅರ್ಜೆಂಟೀನಾದ ಬ್ಯೂನೆಸ್ ಏರಿಸ್ನಲ್ಲಿ ಜನಿಸಿದರು. ಮರಿಯೋ ಜೋಸ್ ಮತ್ತು ರೆಜಿನಾ ಮರಿಯಾ ದಂಪತಿಯ ಐವರು ಮಕ್ಕಳಲ್ಲಿ ಇವರು ಹಿರಿಯರು. ಇಟಲಿಯಿಂದ ಅರ್ಜೆಂಟೀನಾಗೆ ವಲಸೆ ಬಂದ ಮಧ್ಯಮ ವರ್ಗದ ಕುಟುಂಬ ಇವರದ್ದು.
* ರೋಮನ್ ಕ್ಯಾಥೋಲಿಕ್ ಚರ್ಚ್‌ನ 266ನೇ ಪೋಪ್ ಆಗಿ 2013ರಲ್ಲಿ ಆಯ್ಕೆಯಾದರು. ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಮೊದಲ ಪೋಪ್ ಆಗಿದ್ದರು. ಸಾಮಾಜಿಕ ನ್ಯಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು.
* ಇವರು 17ನೇ ವಯಸ್ಸಿನಲ್ಲಿಯೇ ಅಧ್ಯಾತ್ಮದತ್ತ ಒಲವು ಹೊಂದಿ ಸೆಮಿನರಿ ಸೇರಿದರು. ಶ್ರಮಜೀವಿಗಳ ಪ್ರತಿನಿಧಿಯಂತೆ ಗುರುತಿಸಿಕೊಂಡಿದ್ದ ಇವರು ಬ್ಯೂನೆಸ್ ಏರಿಸ್ನ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದರು. ಕೊಳೆಗೇರಿಗಳಿಗೆ ತೆರಳಿ ಬಡವರ ಸೇವೆಯಲ್ಲಿ ನಿರತರಾಗುತ್ತಿದ್ದರು. ಜತೆಗೆ ಬಡವರು, ಶ್ರಮಿಕರು ಮತ್ತು ಅನಾಥರ ಮೇಲೆ ಎಲ್ಲಿಲ್ಲದ ಅಕ್ಕರೆ. ಅವರ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದರು.
* ಅಧ್ಯಾತ್ಮ ಮತ್ತು ಸೇವೆಯಲ್ಲಿ ಆಸಕ್ತಿ ಹೆಚ್ಚಾಗಿ 1958ರಲ್ಲಿ ಧಾರ್ವಿುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ಫ್ರಾನ್ಸಿಸ್ ಆದರು. 1969ರಲ್ಲಿ ಕ್ಯಾಥೋಲಿಕ್ ಪುರೋಹಿತರಾದರು.
* 1973ರಿಂದ 1979ರ ತನಕ ಅರ್ಜೆಂಟೀನಾದ ಜೆಸುಟ್ ಪ್ರಾವಿನ್ಶಲ್ ಸುಪೀರಿಯರ್ ಆಗಿದ್ದರು. 1998ರಲ್ಲಿ ಬ್ಯೂನೆಸ್ ಏರಿಸ್ನ ಆರ್ಚ್ಬಿಷಪ್, 2001ರಲ್ಲಿ ಕಾರ್ಡಿನಲ್ ಆದರು.
* ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೀನರನ್ನು, ಅಂಗವಿಕಲರನ್ನು, ನಿರುದ್ಯೋಗಿಗಳನ್ನು ಹಾಗೂ ನಿರ್ಗತಿಕರನ್ನು ಪೋಪ್ ಫ್ರಾನ್ಸಿಸ್ ಚರ್ಚ್ ಜತೆ ಜೋಡಿಸಿದರು. ಅಷ್ಟೇ ಅಲ್ಲ, ವಸಾಹತುಶಾಹಿ ಕಾಲದಿಂದ ಚರ್ಚ್‌ನ ಅಪರಾಧಗಳಿಗಾಗಿ ಕ್ಷಮೆಯಾಚಿಸಿದ್ದರು.
* ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ರಷ್ಯಾದ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇರಾಕ್ಗೂ ಭೇಟಿ ನೀಡಿ ಶಾಂತಿಯ ಮಹತ್ವ ತಿಳಿಹೇಳಿದ್ದರು.
ನೂತನ ಪೋಪ್ ಸ್ಥಾನಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳು ಲೂಯಿಸ್ ಆಂಟೋನಿಯೊ ಟ್ಯಾಗ್ಲೆ (ಫಿಲಿಪೈನ್ಸ್) ಪಿಯೆಟ್ರೊ ಪರೋಲಿನ್ (ಇಟಲಿ) ಪೀಟರ್ ಟರ್ಕ್ಸನ್ (ಘಾನಾ) ಪೀಟರ್ ಎಡೋ (ಹಂಗೇರಿ) ಏಂಜೊಲೊ ಸ್ಕೋಲಾ (ಇಟಲಿ)
ಇತರ ಹೆಸರುಗಳು: ಮ್ಯಾಟಿಯೊ ಜುಪು್ಪ, ಗೆರ್ಹಾರ್ಡ್ ಮುಲ್ಲರ್, ಏಂಜೆಲೊ ಬಾಗ್ನಾಸ್ಕೊ, ರೇಮಂಡ್ ಬುರ್ಕ್, ರಾಬರ್ಟ್ ಸಾರಾ ಮತ್ತು ಮಾಲ್ಕಮ್ ರಂಜೀತ್ ಅವರೂ ಮುಂದಿನ ಪೋಪ್ ಆಗುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.