ಬೆಂಗಳೂರು: ನಗರದಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ ಸಮಸ್ಯೆಯನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ನಗರದ ಗಾಂಧಿಭವನದ ವಿನೋಬ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಉತ್ತರಿಸಿದರು.
ಸುಮಾರು ೨೦೦ ಮಂದಿ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ, ಶಾಲಾ-ಕಾಲೇಜುಗಳ ಮುಂಭಾಗವೇ ಕಾರು, ಬೈಕ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ. ಹಾಗೆ ಕೆಲವೆಡೆ ಸಿಸಿ ಕ್ಯಾಮರಾಗಳಿಲ್ಲ ಎಂದು ದೂರು ನೀಡಿದ್ದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಹಂತ-ಹಂತವಾಗಿ ಪರಿಹಾರ ನೀಡಲಾಗುತ್ತದೆ. ಜತೆಗೆ ಶಾಲಾ-ಕಾಲೇಜುಗಳ ಮುಂಭಾಗ ಕಾರು, ಬೈಕ್‌ಗಳ ಪಾರ್ಕಿಂಗ್ ಕುರಿತು ಸ್ಥಳೀಯ ಸಂಚಾರ ಠಾಣೆ ಪೊಲೀಸರಿಗೆ ಕ್ರಮಕ್ಕೆ ಸೂಚಿಸುತ್ತೇನೆ ಎಂದರು.
ಇನ್ನು ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸೇಫ್ ಸಿಟಿ ಯೋಜನೆಯಡಿಯಲ್ಲಿ ಸಂಚಾರ ಪೊಲೀಸರು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ, ಪೂರ್ವ ಸಂಚಾರ ವಿಭಾಗದ ಡಿಸಿಪಿ ಸುಮನ್ ಡಿ. ಪೆನ್ನೇಕರ್ ಹಾಗೂ ಇತರೆ ಅಧಿಕಾರಿಗಳು ಇದ್ದರು.