

ರಾಣೆಬೆನ್ನೂರ: ಭಾರತೀಯರಾದ ನಾವೆಲ್ಲ ಭಾವನಾ ಜೀವಿಗಳಾಗಿದ್ದೇವೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಗುರುವಾರ ಸಂಜೆ ಸ್ಥಳೀಯ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ನೂಲ ಹುಣ್ಣಿಮೆ ಅಂಗವಾಗಿ ಆಯೋಜಿಸಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅನ್ಯ ಮಹಿಳೆಯರಲ್ಲಿ ತಾಯಿ ಹಾಗೂ ಸಹೋದರಿಯ ಸ್ಥಾನವನ್ನು ಕಂಡು ಗೌರವಿಸುತ್ತೇವೆ. ಪರದೇಶಿಗರು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚುತ್ತದೆ ಹಾಗೂ ಸರ್ವಧರ್ಮಗಳ ಬಗ್ಗೆ ಸಮಭಾವ ಮೂಡುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭೌತಿಕವಾಗಿ ನಾವು ನವರತ್ನಗಳ ಮಹತ್ವ ತಿಳಿದಿದ್ದೇವೆ. ಅವುಗಳಿಗಿಂತಲೂ ಮಹತ್ವವಾದವುಗಳು ಜಲ, ಅನ್ನ, ಸುಭಾಷಿತಗಳೆಂಬ ತ್ರಿರತ್ನಗಳು. ಅವುಗಳ ಪ್ರಾಪ್ತಿಗಾಗಿ ಮನುಷ್ಯ ಸದಾ ಪ್ರಯತ್ನಿಸಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ತ್ರಿರತ್ನಗಳ ಪ್ರಾಪ್ತಿಯ ಮಾರ್ಗ ಮಾನವನಿಗೆ ದೊರೆಯಲು ಸಾಧ್ಯ ಎಂದರು.
ನೂಲಹುಣ್ಣಿಮೆಯ ಮಹತ್ವ ಕುರಿತು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಉಪನ್ಯಾಸ ನೀಡಿದರು.
ಪ್ರಮುಖರಾದ ಟಿ. ವೀರಣ್ಣ, ಬಿದ್ದಾಡೆಪ್ಪ ಚಕ್ರಸಾಲಿ, ಬಸವರಾಜಪ್ಪ ಕುರುವತ್ತಿ, ಬಸವರಾಜಪ್ಪ ಪಟ್ಟಣಶೆಟ್ಟಿ, ಚೆನ್ನವೀರಗೌಡ ಪಾಟೀಲ, ನಿಂಗನಗೌಡ ಪಾಟೀಲ, ವಿ.ವಿ. ಹರಪನಹಳ್ಳಿ, ಅಮೃತಗೌಡ ಹಿರೇಮಠ, ವಿ.ಎಂ. ಕರ್ಜಗಿ, ಭಾಗ್ಯಶ್ರೀ ಗುಂಡಗಟ್ಟಿ, ಕಸ್ತೂರಿ ಪಾಟೀಲ, ಗುಡ್ಡಪ್ಪ ಹಿಂದಿನಮನಿ, ಎಂ.ಕೆ. ಹಾಲಸಿದ್ದಯ್ಯಶಾಸ್ತ್ರೀ ಮತ್ತಿತರರು ಪಾಲ್ಗೊಂಡಿದ್ದರು.