ರಾಜ್ಯದಲ್ಲಿ ಮುಂಗಾರು ಮಳೆ ಆಶಾದಾಯಕ: ವಾಡಿಕೆಗಿಂತ ಶೇ.11 ಅಧಿಕ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್

page 6 3
Published on

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಆಶಾದಾಯಕವಾಗಿದ್ದು, ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂ.1ರಿಂದ ಜೂ.13ರವರೆಗೆ ವಾಡಿಕೆಯಂತೆ ಸರಾಸರಿ 68 ಮಿ.ಮೀ ಮಳೆಯಾಗಬೇಕು ಆದರೆ ಇದೀಗ 75 ಮಿ.ಮೀ ಮಳೆಯಾಗಿದೆ. ಶೇ.11 ಅಧಿಕ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಾಡಿಕೆಗಿಂತ ಶೇ.19 ಮಳೆ ಕೊರತೆಯಾಗಿತ್ತು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಕಳೆದ ವರ್ಷ ಕರಾವಳಿಯಲ್ಲಿ ಶೇ.50 ಹಾಗೂ ಮಲೆನಾಡಿನಲ್ಲಿ ಶೇ.30 ಮಳೆ ಕೊರತೆಯಾಗಿತ್ತು. ಆದರೆ, ಈ ಬಾರಿ ಕರಾವಳಿಯಲ್ಲಿ ಶೇ.20 ಅಧಿಕ ಮಳೆಯಾಗಿದೆ. ಮಲೆನಾಡಿನಲ್ಲಿ ಶೇ.17 ಕಡಿಮೆ ಮಳೆಯಾಗಿದೆ ಎಂದು ಕೇಂದ್ರ ನಿರ್ದೇಶಕ ಡಾ.ಜಿ. ಎಸ್. ಶ್ರೀನಿವಾಸರೆಡ್ಡಿ ವಿಜಯವಾಣಿಗೆ ಮಾಹಿತಿ ನೀಡಿದರು.

ಕರಾವಳಿಯಲ್ಲಿ ಭಾರಿ ಮಳೆ: ಕರಾವಳಿಯಲ್ಲಿ ಆರ್ಭಟಿಸುತ್ತಿರುವ ಮುಂಗಾರು ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಜೂ 14, 15ರಂದು ಆರೆಂಜ್ ಅಲರ್ಟ್ ಹಾಗೂ ಜೂ 16ರಿಂದ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮಾರುತಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತಷ್ಟು ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಈ ಬಾರಿ ರಾಜ್ಯದಲ್ಲಿ ವಾಡಿಕೆಕ್ಕಿಂತ ತುಸು ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಮಳೆ ಬಿರುಸು: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಅಂಕೋಲಾದಲ್ಲಿ ಶುಕ್ರವಾರ ಒಂದೇ ದಿನ ದಾಖಲೆಯ 200 ಮಿಮೀ ಮಳೆಯಾಗಿದೆ. ರಾತ್ರಿ ಮಳೆಯ ಆರ್ಭಟದಿಂದ ಅನೇಕ ಮನೆಗಳ ಒಳಗೆ ನೀರು ನುಗ್ಗಿ ನಿವಾಸಿಗಳು ತಾಪತ್ರಯಪಟ್ಟರು. ಮಳೆಯಿಂದ ಅಣೆಕಟ್ಟೆಗಳಿಗೆ ನೀರು ಹರಿದು ಬರಲಾರಂಭಿಸಿದೆ. ಕದ್ರಾಕ್ಕೆ 5681 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 4001 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದಿಸಿ ಹೊರಬಿಡಲಾಗುತ್ತಿದೆ. 34.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 30.30 ಮೀಟರ್ ನೀರು ಸಂಗ್ರಹವಾಗಿದೆ. ಸೂಪಾ ಅಣೆಕಟ್ಟೆಗೆ 1092 ಕ್ಯೂಸೆಕ್, ಕೊಡಸಳ್ಳಿಗೆ 4257 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಮುಂದುವರಿದ ಮಳೆ ಆರ್ಭಟ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಹುಲಿಕಲ್ ಘಾಟಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಮರ ಉರುಳಿ 2 ತಾಸು ಶಿವಮೊಗ್ಗ-ಉಡುಪಿ ಮಾರ್ಗ ಸ್ಥಗಿತಗೊಂಡಿತ್ತು. ಹುಲಿಕಲ್ ಘಾಟ್​ನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಗಾಳಿ-ಮಳೆಗೆ ಬೃಹತ್ ಮರ ಧರೆಗುರುಳಿದೆ. ಚಿಕ್ಕಮಗಳೂರು ನಗರ ಹಾಗೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಚದುರಿದಂತೆ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net