ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಶೀಘ್ರವೇ ಸುಗ್ರೀವಾಜ್ಞೆ: ಸಿಎಂ ಅಚ್ಚರಿಯ ನಡೆ

Yediyurappa vvani
Published on

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಂಬಂಧ ಸದ್ಯದಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ಕಾಯ್ದೆ ತಿದ್ದುಪಡಿ ಬಗ್ಗೆ ರಾಜ್ಯದೆಲ್ಲೆಡೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿಯವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ಅದಲ್ಲದೆ, ಸದನದಲ್ಲಿ ಚರ್ಚಿಸಿಯೇ ತಿದ್ದುಪಡಿ ಜಾರಿಗೆ ತರುವುದಾಗಿ ಈವರೆಗೆ ಹೇಳುತ್ತಿದ್ದ ಸರ್ಕಾರದ ನಿಲುವು ಈಗ ದಿಢೀರನೇ ಬದಲಾದಂತಾಗಿದೆ.

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಉಳ್ಳವರೇ ಭೂಮಿ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ಯಡಿಯೂರಪ್ಪ ಅವರು ಶನಿವಾರ ಸುದ್ದಿಗಾರರೆದುರು ಪ್ರತಿಕ್ರಿಯೆ ನೀಡಿದರು.

‘‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಸಾಕಷ್ಟು ಉಪಯೋಗವಿದೆ. ರೈತರಿಗೂ ಅನುಕೂಲವಾಗಲಿದೆ. ಇದು ಮುಂದೆ ಸಿದ್ದರಾಮಯ್ಯ ಅವರಿಗೂ ಗೊತ್ತಾಗಲಿದೆ. ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಸಿದ್ದರಾಮಯ್ಯ ಜತೆ ನಾನು ಚರ್ಚೆ ಮಾಡುತ್ತೇನೆೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ’’ ಎಂದು ಹೇಳಿದರು.

ಇದೇ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ‘‘ಕಾಂಗ್ರೆಸ್ ಈ ಕಾಯ್ದೆಗೆ 1992ರಲ್ಲೇ ಮೊದಲು ಬದಲಾವಣೆ ಮಾಡಿತ್ತು. ಸಿದ್ಧರಾಮಯ್ಯ ಸರ್ಕಾರದಲ್ಲಿ ಮಿತಿ 25 ಲಕ್ಷಕ್ಕೆ ಏರಿಸಿ ಮತ್ತೊಂದು ಬದಲಾವಣೆ ತರಲಾಗಿತ್ತು. ಕಾಯ್ದೆ ತಿದ್ದುಪಡಿಯಿಂದ ಉದ್ಯೋಗಿಗಳು ವಾಪಸ್ ಹಳ್ಳಿಗೆ ಹೋಗಿ ಕೃಷಿ ಮಾಡಲು ಸಹಾಯವಾಗಲಿದೆ’’ ಎಂದರು.

ಇದಕ್ಕೆ ಮುನ್ನ, ಮೊನ್ನೆಯ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾನೂನು ಸಚಿವ ಮಾಧುಸ್ವಾಮಿ, ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಿದ ನಂತರವೇ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net