

ಬೆಂಗಳೂರು: ತೇವಾಂಶ ಕೊರತೆ ಹಾಗೂ ಗಾಳಿಯ ವೇಗ ಇಲ್ಲದಿರುವ ಪರಿಣಾಮ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ದುರ್ಬಲಗೊಂಡಿರುವ ಮುಂಗಾರು ಮಾರುತಗಳು ಜೂ.13ರಿಂದ ಚುರುಕು ಪಡೆದುಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿಯ ದಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜೂ.13ರಂದು ಆರೆಂಜ್, 14ರಂದು ರೆಡ್ ಅರ್ಲಟ್ ಘೋಷಿಸಿದೆ. ಅಲ್ಲದೆ, ಮುಂದಿನ ಮೂರು ದಿನ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ನೀಡಿದೆ.
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜೂ.13ರಿಂದ ಮುಂದಿನ ಎರಡು ದಿನ ಆರೆಂಜ್ ಅರ್ಲಟ್ ಇದ್ದರೆ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಯೆಲ್ಲೋ ಅರ್ಲಟ್ ಇರಲಿದೆ. ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾರದಲ್ಲೇ ಎರಡು ಚಂಡಮಾರುತಗಳು ಉಂಟಾಗಿರುವ ಪರಿಣಾಮ ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಂಡಿದ್ದವು. ಇದರಿಂದ ಮಾರುತಗಳು ದುರ್ಬಲಗೊಂಡಿದ್ದವು. ಆದರೆ, ಜೂ.13ರಿಂದ ಚುರುಕು ಪಡೆದುಕೊಳ್ಳಲಿವೆ. ಇದರ ಪರಿಣಾಮ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಜತೆಗೆ, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹೆಚ್ಚು ಮಳೆಯಾಗಲಿದೆ. ಈಗಾಗಲೆ, ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ವರ್ಷಧಾರೆಯಾಗುತ್ತಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.