ನಾಳೆಯೇ ಅನ್‌ಲಾಕ್ ಬಗ್ಗೆ ನಿರ್ಧಾರ? ಮೊದಲ ಹಂತದಲ್ಲಿ ಯಾವುದಕ್ಕೆ ಸಿಗಲಿದೆ ರಿಲೀಫ್?

bsy
Published on

ಬೆಂಗಳೂರು: ಕರ್ನಾಟಕದ ಲಾಕ್​ಡೌನ್​ ಜೂನ್​ 14ರಂದು ಮುಗಿಯಲಿದೆ. ಈಗಾಗಲೇ ಸೋಂಕಿನ ಪ್ರಮಾಣ ತಗ್ಗಿರುವುದರಿಂದ ಮತ್ತೆ ಲಾಕ್​ಡೌನ್​ ಮುಂದುವರಿಕೆಯಾಗುವುದಿಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಅನ್​ಲಾಕ್​ ಮಾಡಿದರೂ ಹಂತ ಹಂತವಾಗಿ ತೆರೆಯಲು ಅನುಮತಿ ನೀಡುವ ಯೋಜನೆಯಿದ್ದು, ಈ ಕುರಿತಾಗಿ ಗುರುವಾರದಂದೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಶುಕ್ರವಾರದಂದು ಹಾಸನ ಹಾಗೂ ಶಿವಮೊಗ್ಗಕ್ಕೆ ತೆರಳಲಿದ್ದಾರೆ. ಹಾಸನದಲ್ಲಿ ಕೋವಿಡ್ ಕುರಿತಾಗಿ ಸಭೆ ನಡೆಸಿ ನಂತರ ಶಿಕಾರಿಪುರಕ್ಕೆ ತೆರಳಲಿದ್ದಾರೆ. ಶನಿವಾರ ಶಿಕಾರಿಪುರದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಸಿಎಂ ಅವರು ಭಾನುವಾರದಂದು ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಸೋಮವಾರವೇ ಲಾಕ್​ಡೌನ್​ ಮುಗಿಯಲಿದೆ. ಈ ಮಧ್ಯೆ ಸಭೆ, ಚರ್ಚೆಗೆ ಸಮಯ ಸಿಗುವುದಿಲ್ಲವಾದ್ದರಿಂದ ಗುರುವಾರದಂದೇ ಅನ್​ಲಾಕ್​ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುರುವಾರದಂದು ಎಲ್ಲ ಜಿಲ್ಲಗಳ ಡಿಸಿ ಜತೆ ಸಿಎಂ ವಿಡಿಯೋ ಸಂವಾದ ಹಾಗೂ ಸಚಿವರ ಜತೆ ಸಭೆ ನಡೆಸಲಿದ್ದಾರೆ. ಜಿಲ್ಲೆಗಳ ಸ್ಥಿತಿಗತಿಯನ್ನು ಚರ್ಚಿಸಿ ಅನ್​ಲಾಕ್​ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮೊದಲ ಹಂತದಲ್ಲಿ ಅಂಗಡಿ, ಮುಗ್ಗಟ್ಟು, ಮಾರುಕಟ್ಟೆ, ಮಾಲ್​ಗಳನ್ನು ನಿಗದಿತ ಅವಧಿಯಲ್ಲಿ ತೆರೆಯಲು ಅನುಮತಿ ನೀಡುವುದು, ಶೇಕಡಾ 50 ರಷ್ಟು ಸೀಟ್ ಹಾಕಿಕೊಂಡು ಸಾರಿಗೆ ಸಂಚಾರ, ಸರ್ಕಾರಿ ಕಚೇರಿಗಳ ಹಾಜರಾತಿ ನೂರಕ್ಕೆ ಏರಿಕೆ, ಕಾರ್ಖಾನೆಗಳಿಗೆ ರಿಲೀಫ್ ನೀಡುವ ಸಾಧ್ಯತೆಯಿದೆ.

ಹಾಗೆಯೇ ಎರಡನೇ ಹಂತದಲ್ಲಿ ಜಿಮ್, ಧಾರಾವಾಹಿ ಶೂಟಿಂಗ್, ಮೂರನೇ ಹಂತದಲ್ಲಿ ಸಭೆ ಸಮಾರಂಭ, ಮದುವೆ ಮಾಲ್​ಗಳಿಗೆ ಇನ್ನಷ್ಟು ವಿನಾಯಿತಿ, ನಾಲ್ಕನೇ ಹಂತದಲ್ಲಿ ಸಿನಿಮಾ ಥಿಯೇಟರ್ ಮತ್ತು ಜನ ಸೇರುವ ಸಮಾರಂಭಗಳಿಗೆ ಅವಕಾಶ ನೀಡಿ ಎಂದು ತಜ್ಞರು ಸಲಹೆ ಕೊಟ್ಟಿರುವುದಾಗಿ ತಿಳಿಸಲಾಗಿದೆ. ತಜ್ಞರ ಅಭಿಪ್ರಾಯದ ಮೇಲೆ ನಾಳಿನ ಸಭೆ ಬಳಿಕ ಸಿಎಂ ಅನ್​ಲಾಕ್​ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net