

| ಮೃತ್ಯುಂಜಯ ಕಪಗಲ್ ಬೆಂಗಳೂರು
ಕರೊನಾ ಕಾರ್ಮೋಡದ ನಡುವೆಯೇ ನಾಳೆ (ಸೆ.21) ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, 10 ದಿನಗಳ ಅಧಿವೇಶನ ಯಡಿಯೂರಪ್ಪ ಸರ್ಕಾರಕ್ಕೆ ಅಗ್ನಿಪರೀಕ್ಷೆ ಯಾಗಿದೆ. ಆಡಳಿತ-ಪ್ರತಿಪಕ್ಷಗಳ ಮಧ್ಯೆ ಸಿಡಿಲಬ್ಬರದ ವಾಗ್ಘರಿ, ಪ್ರಶ್ನೋತ್ತರಗಳ ಸುರಿಮಳೆಗೆ ಉಭಯ ಸದನಗಳು ಸಾಕ್ಷಿಯಾಗುವ ನಿರೀಕ್ಷೆಯಿದೆ. ಮಹತ್ವದ ಮಸೂದೆಗಳು, ಸುಗ್ರೀವಾಜ್ಞೆಗಳಿಗೆ ಒಪ್ಪಿಗೆ ಪಡೆಯಲೇಬೇಕಾದ ಸವಾಲು ಸರ್ಕಾರದ ಮುಂದಿದ್ದು, ಪ್ರತಿಪಕ್ಷಗಳ ಕಾರ್ಯತಂತ್ರ ಪರೀಕ್ಷೆಗೆ ಒಳಗಾಗುವುದು ನಿಶ್ಚಿತ.
ಪ್ರಸ್ತಾಪ ಸಾಧ್ಯತೆ: ಕರೊನಾ ಪರಿಕರಗಳ ಖರೀದಿ ಹಗರಣದ ಆರೋಪ, ಕರೊನಾ ಬಾಧಿತರಿಗೆ ಪರಿಹಾರ ಹಂಚಿಕೆ, ಭೂ ಸುಧಾರಣೆ, ಎಪಿಎಂಸಿ, ಕಾರ್ವಿುಕ ಕಾಯ್ದೆಗಳಿಗೆ ತಿದ್ದುಪಡಿ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ, ಡ್ರಗ್ಸ್ ಪ್ರಕರಣ, ಹಣಕಾಸಿನ ಸ್ಥಿತಿಗತಿ, ನೆರೆ ನೆರವು, ಕೇಂದ್ರದಿಂದ ಜಿಎಸ್ಟಿ ಪರಿಹಾರ ನಿರಾಕರಣೆ ಇತ್ಯಾದಿ ವಿಷಯಗಳು ಪ್ರಸ್ತಾಪವಾಗಲಿವೆ.
ಇತ್ತ ಬಿಜೆಪಿ ಕೂಡ ನಿಲುವಿಗೆ ಬದ್ಧವಾಗಿ ಅಧಿವೇಶನ ಎದುರಿಸಲು ಸನ್ನದ್ಧವಾಗಿದೆ. ಸದನದಲ್ಲೇ ಪ್ರತಿಯೊಂದು ವಿಷಯಗಳಿಗೆ ವಿಸ್ತೃತ ಅಂಕಿ-ಅಂಶಗಳನ್ನು ದಾಖಲೆ ಸಹಿತ ವಿವರಿಸಿ, ಪ್ರತಿಪಕ್ಷಗಳ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿ ವಾಸ್ತವಾಂಶ ಜನರ ಮುಂದಿಡುತ್ತೇವೆ ಎಂಬ ವಿಶ್ವಾಸಲ್ಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಸಚಿವ ಸಹೋದ್ಯೋಗಿಗಳ ಸಭೆ ಕರೆದು ವಿಸõತವಾಗಿ ರ್ಚಚಿಸಿದ್ದು, ಸವಾಲಿಗೆ ಸಮರ್ಥವಾಗಿ ಜವಾಬು ನೀಡುವುದಕ್ಕೆ ಅಣಿಗೊಳಿಸಿದ್ದಾರೆ.
ಕರೊನಾ ಆರಂಭಗೊಂಡು ಬಜೆಟ್ ಅಧಿವೇಶನ ಮೊಟಕಾದ ಬಳಿಕ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಮತ್ತೊಮ್ಮೆ ಅತಿವೃಷ್ಟಿ, ಪ್ರವಾಹ ರಾಜ್ಯವನ್ನು ಕಾಡಿದೆ. ಇವೆಲ್ಲ ಅಸ್ತ್ರಗಳನ್ನು ಪ್ರತಿಪಕ್ಷಗಳು ಬತ್ತಳಿಕೆಗೆ ಸೇರಿಸಿಕೊಂಡಿದ್ದು, ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ‘ಸಿಎಂ ಲೆಕ್ಕ ಕೊಡಿ’ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಸಮರ, ‘ಉತ್ತರಿಸಿ ಬಿಜೆಪಿ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ, ಸದನದಲ್ಲೇ ಕೇಳುತ್ತೇವೆಂದ ಮಾಜಿ ಸಿಎಂ ಕುಮಾರಸ್ವಾಮಿ ಮಾತು ಮತ್ತೆ ಮುನ್ನೆಲೆಗೆ ಬರಲಿವೆ.
ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನ ಮೊಟಕುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ವಿಧಾನಮಂಡಲ ಅಧಿವೇಶನವನ್ನು ಮೂರು ದಿನದಲ್ಲಿ ಪೂರ್ಣಗೊಳಿಸುವ ಬಗ್ಗೆ ಸರ್ಕಾರ ಆಸಕ್ತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಹಾಗೂ ಇತರರ ಜತೆ ಶನಿವಾರ ಸಂಜೆ ದೂರವಾಣಿಯಲ್ಲಿ ಮಾತನಾಡಿ, ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ದಿನಕ್ಕೆ ಅಧಿವೇಶನ ಮುಗಿಸಲು ಸಿಎಂ ಕೋರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿಧೇಯಕಗಳನ್ನು ಅಂಗೀಕಾರ ಮಾಡಬೇಕಾಗಿರುವ ಕಾರಣ ಮೂರು ದಿನಕ್ಕೆ ಅಧಿವೇಶನ ಮುಗಿಸಲು ಸಾಧ್ಯವಿಲ್ಲವೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರೆಂದು ಹೇಳಲಾಗಿದೆ. ಆದರೆ ಮೂರು ಪ್ರಮುಖ ವಿಧೇಯಕಗಳಾದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಹಾಗೂ ಪಂಚಾಯತ್ರಾಜ್ ತಿದ್ದುಪಡಿ ವಿಧೇಯಕಗಳನ್ನು ಈ ಅಧಿವೇಶನದಲ್ಲಿ ಮಂಡಿಸಲೇಬಾರದು ಎಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆ.