ಹಿಂಗಾರು ಮಳೆ ಇಂದು ರಾಜ್ಯ ಪ್ರವೇಶ

ವಿಜಯವಾಣಿ (10)
Published on

ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು ಮಳೆ ಬುಧವಾರ ಕೊನೆಗೊಂಡಿದ್ದು, ಗುರುವಾರದಿಂದ (ಅ.16) ಹಿಂಗಾರು ಮಳೆ ರಾಜ್ಯ ಪ್ರವೇಶಿಸಲಿದೆ. ಈ ಬಾರಿ ಹಿಂಗಾರು ಅವಧಿ ನವೆಂಬರ್ ತಿಂಗಳಾಂತ್ಯದವರೆಗೆ ಇರಲಿದ್ದು, ವಾಡಿಕೆಯಷ್ಟೇ ಮಳೆ ಸುರಿಯಲಿದೆ. ಹೆಚ್ಚಿನ ವರ್ಷಧಾರೆ ಅಥವಾ ಪ್ರವಾಹಕ್ಕೆ ಆಸ್ಪದ ನೀಡುವಷ್ಟು ಮಳೆಯಾಗದು. ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸೀಮಿತವಾಗಿ ಹಿಂಗಾರು ಆವರಿಸಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಳ್ಳುತ್ತದೆ.ಈ ಬಾರಿ ಬದಲಾದ ಹವಾಮಾನದಿಂದಾಗಿ 15 ದಿನ ವಿಸ್ತರಣೆಯಾಗಿತ್ತು.

ವಿಸ್ತರಣೆ ಅವಧಿಯಲ್ಲಿ ಕಾಡಿದ ಕೊರತೆ: ಮುಂಗಾರು ಮಳೆ ವಿಸ್ತರಣೆಯಾಗಿದ್ದ ಅವಧಿಯಲ್ಲಿ (ಅ.1ರಿಂದ 15) ಹಳೇ ಮೈಸೂರು ಭಾಗದಲ್ಲಿ ಚಿತ್ರದುರ್ಗ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವಾಡಿಕೆ ಅಥವಾ ಹೆಚ್ಚು ವರ್ಷಧಾರೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಶಿವಮೊಗ್ಗ, ಕೊಡಗು ಹಾಗೂ ಕರಾವಳಿಯ ಮೂರೂ ಜಿಲ್ಲೆಗಳಲ್ಲೂ ಕೊರತೆ ಕಂಡಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಣಿಸಿಕೊಂಡಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮಾಹಿತಿ ನೀಡಿದೆ.

ಅ.1-15ರವರೆಗೆ ಮಳೆ ವಿವರ

  • ಮಳೆ ಪ್ರದೇಶ ವಾಡಿಕೆ ವಾಸ್ತವ ವ್ಯತ್ಯಾಸ
  • ದಕ್ಷಿಣ ಒಳನಾಡು 79 88 ಶೇ.+12
  • ಉತ್ತರ ಒಳನಾಡು 70 20 ಶೇ.-71
  • ಮಲೆನಾಡು 91 71 ಶೇ.-22
  • ಕರಾವಳಿ 115 64 ಶೇ.-44
  • ಸರಾಸರಿ 80 52 ಶೇ.-35, (ಅಂಕಿ-ಅಂಶ ಮಿ.ಮೀ.ಗಳಲ್ಲಿ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net