

ಬೆಂಗಳೂರು: ಮಾನ್ಸೂನ್ ಚುರುಕಾಗಿರುವ ಪರಿಣಾಮ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಆಯ್ದ ಜಿಲ್ಲೆಗಳಲ್ಲಿ ಶನಿವಾರ ಧಾರಾಕಾರ ವರ್ಷಧಾರೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.20ರಿಂದ ಮುಂದಿನ 2 ದಿನ ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈ ಅವಧಿಯಲ್ಲಿ 20 ಸೆಂಮೀವರೆಗೆ ಮಳೆಯಾಗಬಹುದು. ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.22ರಿಂದ ಜು.26ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಜತೆಗೆ ಗಾಳಿ ವೇಗವೂ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜು.20ರಿಂದ ಜು.26ರವರೆಗೆ ಬಿರುಸು ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಮುಂದಿನ 2 ದಿನ ಹಾಗೂ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಜು.21ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ.
ಕರಾವಳಿಯಲ್ಲಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಉತ್ತಮ ಮಳೆಯಾಗಿದ್ದು, ಬಳಿಕ ಬಿಡುವು ನೀಡಿತ್ತಾದರೂ ಸಂಜೆಯ ವೇಳೆ ಮತ್ತೆ ಸುರಿಯಿತು. ಭಾರಿ ಮಳೆ ಹಿನ್ನೆಲೆಯಲ್ಲಿ ಶನಿವಾರ ಉಳ್ಳಾಲ ಮತ್ತು ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಶುಕ್ರವಾರ ಸಂಜೆಯಿಂದ ಮಳೆಯ ಪ್ರಮಾಣ ಶನಿವಾರ ಮುಂಜಾನೆ ತನಕ ಹೆಚ್ಚಾಗುತ್ತಾ ಸಾಗಿದ ಪರಿಣಾಮ ಜಿಲ್ಲೆಯ ಕೆಲವೊಂದು ಭಾಗದಲ್ಲಿ ಮನೆಗಳಿಗೆ ಹಾನಿ ಸೇರಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನದಿಗಳಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಕೊಂಚ ಏರಿಕೆ ಕಾಣಿಸಿಕೊಂಡಿದೆ.
ಕೊಡಗಿನಲ್ಲಿ ಇಳಿಮುಖ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆಯ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 12.41 ಮಿ.ಮೀ. ಮಳೆಯಾಗಿದೆ. 2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ ಶನಿವಾರದ ಮಾಹಿತಿ ಪ್ರಕಾರ 2856.93 ಅಡಿ ನೀರಿದೆ. ನೀರಿನ ಒಳಹರಿವು 4276 ಕ್ಯೂಸೆಕ್ ಇದ್ದು, ನದಿಗೆ 2812 ಕ್ಯೂಸೆಕ್, ನಾಲೆಗೆ 500 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.