

ಎಲ್ಲೆಲ್ಲೂ ಕರೊನಾ ಆತಂಕ. ಲಾಕ್ಡೌನ್. ಮನುಷ್ಯರೆಲ್ಲ ಮನೆ ಸೇರಿದ್ದಾರೆ. ಪ್ರಾಣಿಗಳೆಲ್ಲ ರೋಡಿಗೆ ಇಳೀತಿವೆ. ಮನುಷ್ಯರ ಸಂಚಾರ ಕಡಿಮೆಯಾಗುತ್ತಿದ್ದಂತೆ ಕಾಡು ಪ್ರಾಣಿಗಳು ರಸ್ತೆಗೆ ಬಂದು ರಾಜಾರೋಷವಾಗಿ ಓಡಾಡುತ್ತಿರುವ ಹಲವು ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
ಈಗ ಕೋತಿಗಳ ವಿಡಿಯೋವೊಂದು ಟ್ರೆಂಡ್ ಸೃಷ್ಟಿಸಿದೆ. ಹೇಳಿಕೇಳಿ ಕೋತಿಗಳು ನೋಡಿ..ಚೇಷ್ಟೆ ಸ್ವಲ್ಪ ಜಾಸ್ತಿನೇ ಮಾಡ್ತವೆ..ಅಷ್ಟಕ್ಕೂ ಅವು ಏನು ಮಾಡಿವೆ? ನೆಟ್ಟಿಗರು ಅಷ್ಟು ಆಕರ್ಷಿತರಾಗಲು ಕಾರಣ ಏನು ಗೊತ್ತಾಗಬೇಕಾದರೆ ಈ ಸುದ್ದಿ ಓದಿ..ವಿಡಿಯೋ ನೋಡಿ..
ಮುಂಬೈನ ಬೋರಿವಾಲಿಯಲ್ಲಿ ನಡೆದ ಸಖತ್ ಫನ್ನಿ ಘಟನೆ ಇದು. ಮನುಷ್ಯರಿಲ್ಲದೆ ಬಿಕೋ ಎನ್ನುತ್ತಿದ್ದ ಸ್ವಿಮ್ಮಿಂಗ್ ಪೂಲ್ನಲ್ಲಿ ಕೋತಿಗಳು ಮನಸೋ ಇಚ್ಛೆ ಈಜಿ, ಫುಲ್ ಮಜಾ ಮಾಡಿದ್ದಾವೆ. ಈ ವಿಡಿಯೋವನ್ನು ಶೇರ್ ಮಾಡಿದ ಇನ್ಸ್ಟಾಗ್ರಾಂ ಬಳಕೆದಾರರೋರ್ವರು, ಕೋತಿಗಳು ಹಲವು ವರ್ಷಗಳಿಂದ ಕಾಯುತ್ತಿದ್ದವೇನೋ..ಈಗ ಅವಕಾಶ ಸಿಕ್ಕಂತಾಗಿದೆ ಎಂದು ಅಷ್ಟೇ ಫನ್ನಿ ಕ್ಯಾಪ್ಷನ್ ಬರೆದಿದ್ದಾರೆ.
ಒಂದು ಕೋತಿ ಅಲ್ಲಿನ ಕಟ್ಟಡದ ಬಾಲ್ಕನಿಗೆ ಹಾಕಲಾಗಿರುವ ಕಂಬಿಯ ಮೇಲೆ ಕುಳಿತಿರುತ್ತದೆ. ಮತ್ತೊಂದು ಅಲ್ಲೇ ಪಕ್ಕದ ಮನೆಯ ಕಿಟಕಿಯ ಮೇಲೆ ಕುಳಿತಿರುತ್ತದೆ. ಬಾಲ್ಕಿನಿಯ ಮೇಲೆ ಕುಳಿತ ಮಂಗ ಕೂಡಲೇ ಸ್ವಿಮ್ಮಿಂಗ್ ಪೂಲ್ಗೆ ಹಾರುತ್ತದೆ. ಸ್ವಲ್ಪ ಹೊತ್ತು ಸ್ವಚ್ಛಂದವಾಗಿ ಈಜಿ ಕೊಳದ ಒಂದು ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಆ ಒಂದು ಮಂಗವನ್ನು ನೋಡಿದ ಉಳಿದ ಮಂಗಗಳೂ ಅದನ್ನೇ ಮಾಡುತ್ತವೆ. ಇಡೀ ಈಜುಕೊಳದಲ್ಲಿ ಯಾರ ಭಯವೂ ಇಲ್ಲದೆ ಆಟವಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ವಿಡಿಯೋ ಪೋಸ್ಟ್ ಆದ ಕೆಲವೇ ಹೊತ್ತಲ್ಲಿ ವಿಪರೀತ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಅನೇಕರು ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)