ಕರೊನಾದಿಂದ ಹೆಚ್ಚುತ್ತೆ ಪ್ರತಿರೋಧ ಶಕ್ತಿ; ಮರು ಸೋಂಕಿನ ಸಂಭಾವ್ಯತೆಯೂ ಕಡಿಮೆ

Covid Symptoms 28 June 20
Published on

ನವದೆಹಲಿ: ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಕರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕ. ಹೀಗಾಗಿ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಆಹಾರ, ಪಾನೀಯಗಳನ್ನು ಸೇವಿಸಿ ಎಂದಿ ಸಲಹೆ ನೀಡಲಾಗುತ್ತಿದೆ. ಆದರೆ, ಒಮ್ಮೆ ಕರೊನಾ ಸೋಂಕಿಗೆ ಒಳಗಾದಲ್ಲಿ ದೇಹದಲ್ಲಿ ವೈರಸ್​ಗೆ ಪ್ರತಿರೋಧ ತೋರುವ ಶಕ್ತಿ ಹೆಚ್ಚಾಗುತ್ತದೆ ಹಾಗೂ ಮರು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆ ಎಂಬುದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ.

ಚೀನಾದ ಪೀಕಿಂಗ್​ ಯುನಿಯನ್​ ವೈದ್ಯಕೀಯ ಕಾಲೇಜಿನ ಸಂಶೋಧಕರು ಇದನ್ನು ಕಂಡುಕೊಂಡಿದ್ದು, ಮಂಗಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.

ಕರೊನಾ ಸೋಂಕಿಗೆ ಒಳಗಾದಾಗ ಮಂಗಗಳು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಆರಂಭದಲ್ಲಿ ಕೋವಿಡ್​ನ ಲಘು ಹಾಗೂ ಸಾಮಾನ್ಯ ಲಕ್ಷಣಗಳು ಕಂಡು ಬಂದ ಬಳಿಕವೂ ಎರಡು ವಾರಗಳಲ್ಲಿಯೇ ಅವುಗಳು ಚೇತರಿಸಿಕೊಂಡಿವೆ. 28 ದಿನಗಳ ಬಳಿಕ ಅವುಗಳಲ್ಲಿ ಮರು ಸೋಂಕಿಗೆ ಒಳಗಾಗುವ ಅಪಾಯವೂ ಕಡಿಮೆಯಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಮಂಗಗಳ ಶ್ವಾಸನಾಳದ ಮೂಲಕ ಅವುಗಳಿಗೆ ವೈರಸ್​ ಸೋಂಕು ತಗಲುವಂತೆ ಮಾಡಲಾಯಿತು. ನಿಯಮಿತವಾಗಿ ಪಡೆದ ಮಾದರಿಗಳನ್ನು ವಿಶ್ಲೇಷಿಸಿದಾಗ ಮೂರೇ ದಿನಗಳಲ್ಲಿ ಸೋಂಕು ವ್ಯಾಪಿಸುವ ಸಾಮರ್ಥ್ಯ ಹೆಚ್ಚಾಗಿರುವುದು ಕಂಡುಬಂತು.

ಅಚ್ಚರಿಯ ವಿಷಯವೆಂದರೆ, ಸೋಂಕಿನ ಮೊದಲ ಡೋಸ್​ಗೆ ಅವುಗಳಲ್ಲಿ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ತಿಳಿದು ಬಂತು. ಈ ಶಕ್ತಿಯೇ ಅವುಗಳನ್ನು ಮತ್ತೆ ಸೋಂಕಿಗೆ ಒಳಗಾಗುವುದರಿಂದ ತಡೆದಿದೆ ಎಂದು ತಜ್ಞರು ಹೇಳಿದ್ದಾರೆ.

ಅಮೆರಿಕದ ಷಿಕಾಗೋದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆಸಿದ ಅಧ್ಯಯನದಲ್ಲೂ ಇದೇ ಅಂಶ ಕಂಡುಬಂದಿದೆ. ಕೋವಿಡ್​ ಸೋಂಕಿಗೆ ಒಳಗಾದವರು ಚೇತರಿಸಿಕೊಂಡಲ್ಲಿ ಅವರಲ್ಲಿ ಮತ್ತೆ ಸೋಂಕಿಗೆ ಒಳಗಾಗದಂತೆ ತಡೆಯುವ ಶಕ್ತಿಯೂ ಮೂಡಿರುತ್ತದೆ ಎಂದು ಹೇಳಲಾಗಿದೆ.

ಸದ್ಯ ಲಸಿಕೆಗಳು ಸಂಶೋಧನಾ ಹಂತದಲ್ಲಿ ಇರುವುದರಿಂದ ಈ ವಿಚಾರ ಆಶಾದಾಯಕ ವಿಚಾರವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net