

ಲಖನೌ: ವಿಚಿತ್ರ ಘಟನೆಯೊಂದರಲ್ಲಿ ಮಂಗವೊಂದು ಕಾರಿನ ಸನ್ರೂಫ್ (Sunroof) ಮೇಲೆ ಜಿಗಿದು ಅದನ್ನು ಪುಡಿ ಮಾಡಿರುವ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಕಾರಿನ ಮಾಲೀಕನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ವಾರಣಾಸಿಯ ವಿಶ್ವೇಶ್ವರಗಂಜ್ನಲ್ಲಿ ನವೆಂಬರ್ 19ರಂದು ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ನಮ್ಮ ದೇಶದಲ್ಲಿ ಸನ್ ರೂಫ್ ಇರುವ ಕಾರುಗಳ ಅಗತ್ಯವಿದೆಯೇ ಎಂದು ಕಮೆಂಟ್ ಹಾಕಿದ್ಧಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕಟ್ಟಡವೊಂದರಿಂದ ಜಿಗಿದ ಮಂಗವು ಐಷಾರಾಮಿ ಕಾರ್ನ ಸನ್ರೂಫ್ ಮೇಲೆ ಬಿದ್ದು ಅದನ್ನು ಪುಡಿ ಪುಡಿ ಮಾಡಿದೆ. ಮೊದಲಿಗೆ ವಿಡಿಯೋ ನೋಡಿದವರು ಮಂಗಕ್ಕೆ ದೊಡ್ಡ ಮಟ್ಟದಲ್ಲಿ ಗಾಯ ಆಗಿದೆ ಎಂದು ಭಾವಿಸಿದರಾದರು ಆ ನಂತರ ನಿರಾಯಸವಾಗಿ ಆಚೆ ಬಂದು ಓಡಿ ಹೋಗುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ರಾಜಾ ಬಾಬು ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 834.6 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ಇತ್ತ ವೈರಲ್ ವಿಡಿಯೋಗೆ ನೆಟ್ಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಮಂಗವೆಂದರೇ ಚೇಷ್ಟೆಗೆ ಕುಚೇಷ್ಟೆಗೆ ಇನ್ನೊಂದು ಹೆಸರು. ಈ ವಾನರ ಮಾಡಿದ ಅವಾಂತರವನ್ನು ಕಂಡ ಸೋಷಿಯಲ್ ಮೀಡಿಯಾ ಜನರು ಕಾರ್ ಮಾಲೀಕನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.