ಶಿವಸೇನಾ ಸಭೆ ವೇದಿಕೆಯಲ್ಲಿ ಕಪಿರಾಯ ಹಾಜರ್​!: ಮುಂದೇನಾಯಿತು? ವಿವರ ಇಲ್ಲಿದೆ..

monkey
Published on

ಥಾಣೆ(ಮಹಾರಾಷ್ಟ್ರ): ಭಿವಂಡಿಯಲ್ಲಿ ಶಿವಸೇನಾ(ಯುಬಿಟಿ-ಠಾಕ್ರೆ ಗುಂಪು) ನಾಯಕಿ ಸುಷ್ಮಾ ಅಂಧಾರೆ ತಮ್ಮ ಇತ್ತೀಚಿನ ಸಾರ್ವಜನಿಕ ಸಭೆಯೊಂದರಲ್ಲಿ ವಿಚಿತ್ರ ಸನ್ನಿವೇಶವನ್ನು ಎದುರಿಸಿದರು. ಆಕೆ ಭಾಷಣದ ವೇಳೆ ವೇದಿಕೆಗೆ ಪ್ರವೇಶಿಸಿದ ಮಂಗ ಕಡೇ ತನಕ ಅಲ್ಲೇ ಠಿಕಾಣಿ ಹೂಡಿತ್ತು. ಇದು ನೆರೆದಿದ್ದ ಜನರನ್ನು ಆಕರ್ಷಿಸಿತು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದ್ದು, ವ್ಯಾಪಕ ಪ್ರಚಾರಕ್ಕೆ ಕಾರಣವಾಗಿತ್ತು.

ವೈರಲ್ ವೀಡಿಯೊದಲ್ಲಿ, ಸುಷ್ಮಾ ಅಂಧಾರೆ ಮೈಕ್ರೊಫೋನ್ ಮೂಲಕ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಅವರು ಶಿಂಧೆ ಸೇನೆಯ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು, "ಮಹಾರಾಷ್ಟ್ರ ಯಾವತ್ತೂ ಈ ರೀತಿ ಇರಲಿಲ್ಲ. ಕೆಲವರು ಉದ್ಧವ್ ಠಾಕ್ರೆ ಪಕ್ಷವನ್ನು ಉತ್ತಮವಾಗಿ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ." ಎನ್ನುತ್ತಿದ್ದಂತೆ ಕೋತಿ ಆಕೆಯ ಕಡೆಗೆ ಹಾರಿ ಬಂದಿತು. ಬಳಿಕ ಆಕೆಯ ಮುಂದೆ ಕುಳಿತಿತುಕೊಂಡಿತು. ಸ್ವಲ್ಪ ಸಮಯದ ಬಳಿಕ ಆಕೆ ಪಕ್ಕದಲ್ಲಿ ಕುಳಿತುಕೊಂಡಿತು. ಆದರೆ ಸುಷ್ಮಾ ವಿಚಲಿತರಾಗದೆ ತಮ್ಮ ಮಾತನ್ನು ಮುಂದುವರಿಸಿರುವುದು ಕಾಣಬಹುದಾಗಿದೆ.

ಸುಷ್ಮಾ ಮಾತಿನ ಉದ್ದಕ್ಕೂ ಕೋತಿ ಅಲ್ಲಿಂದ ಬಿಟ್ಟು ಕದಲಲಿಲ್ಲ. ಮಂಗನ ಉಪಸ್ಥಿತಿ ನಡುವೆಯೂ ಆಕೆ ಶಾಂತವಾಗಿದ್ದರು. ವೇದಿಕೆಯಲ್ಲಿದ್ದ ಆಕೆಯ ಬೆಂಬಲಿಗರು ಕೋತಿಗೆ ಬಾಳೆಹಣ್ಣುಗಳನ್ನು ಪಕ್ಕಕ್ಕೆ ಎಸೆದು ಓಡಿಸಲು ಯತ್ನಿಸಿದರು. ಆದರೂ ಅದು ಹೋಗಲಿಲ್ಲ. ಕಡೆಗೆ ಆಕೆ ಭಾಷಣ ನಿಲ್ಲಿಸಿ ಮತ್ತಷ್ಟು ಬಾಳೆಹಣ್ಣುಗಳನ್ನು ಪಕ್ಕಕ್ಕೆ ಎಸೆದಾಗ ಕೋತಿ ಅವುಗಳನ್ನು ತೆಗೆದುಕೊಂಡು ಆಕೆಯ ಹಿಂದೆ ಹಾರಿ ವೇದಿಕೆಯಿಂದ ಮತ್ತು ಸಾರ್ವಜನಿಕ ಸಭೆಯಿಂದ ನಿರ್ಗಮಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net