'ಮನಿ – ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್' ವಿಶಿಷ್ಟ ಜಂಟಿ ಪುಸ್ತಕ ಏ.10ರಂದು ಲೋಕಾರ್ಪಣೆ

Stock Market
Published on

ಬೆಂಗಳೂರು: ಹಿರಿಯ ಪತ್ರಕರ್ತ ಶರತ್ ಎಂ.ಎಸ್. ಬರೆದಿರುವ, ಬಹುರೂಪಿ ಹೊರತಂದಿರುವ ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ವಿಶಿಷ್ಟ ಜಂಟಿ ಪುಸ್ತಕ ಏಪ್ರಿಲ್ 10ರಂದು ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಪುಸ್ತಕ ಪ್ರಕಾಶನ ಜಂಟಿಯಾಗಿ ಈ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿವೆ. ಏಪ್ರಿಲ್ 10ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆ.ಜಿ. ರಸ್ತೆಯ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ, ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಮತ್ತು ಫ್ರೀಡಂ ಆಪ್ ಸಿಇಒ ಹಾಗೂ ಸಂಸ್ಥಾಪಕ ಸಿ.ಎಸ್. ಸುಧೀರ್ ಪಾಲ್ಗೊಳ್ಳಲಿದ್ದಾರೆ.

ಪುಸ್ತಕದ ಬಗ್ಗೆ: ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಇದು ಜಂಟಿ ಪುಸ್ತಕವಾಗಿದ್ದು ಒಂದು ಕಡೆಯಿಂದ ಹಣಕಾಸು ನಿರ್ವಹಣೆಯ ಬಗ್ಗೆ ಬರೆಯಲಾಗಿದೆ, ಮತ್ತೊಂದು ಭಾಗದಿಂದ ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿಸಿಕೊಡಲಾಗಿದೆ. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರ ಪ್ರಕಾಶನ ಸಂಸ್ಥೆ ಬಹುರೂಪಿ ಇದನ್ನು ಹೊರತಂದಿದ್ದು ರಾಜ್ಯದ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಮೈಸೂರಿನಲ್ಲಿ ಎಂ.ಎ. ಪದವಿ ಪೂರೈಸಿರುವ ಶರತ್, ಚಾಮರಾಜನರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಗ್ರಾಮದವರು. ಆಂದೋಲನ, ಕಸ್ತೂರಿ ಟಿವಿ, ಟಿವಿ 9, ಸಮಯ ಟಿವಿ, ವಿಜಯವಾಣಿ, ನ್ಯೂಸ್ 18, ದಿಗ್ವಿಜಯ ಟಿವಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಶರತ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂದರೆ 30ನೇ ವಯಸ್ಸಿನಲ್ಲೇ ದಿಗ್ವಿಜಯ ಟಿವಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಷೇರು ಮಾತು ಅಂಕಣ ಜನಪ್ರಿಯತೆ ತಂದುಕೊಟ್ಟಿತ್ತು. ಸದ್ಯ ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಅವರು ವೈಯಕ್ತಿಕ ಹಣಕಾಸು ನಿರ್ವಹಣೆ ಸಂಸ್ಥೆ ಇಂಡಿಯನ್ ಮನಿಯಲ್ಲಿ ಸುಮಾರು ನಾಲ್ಕೂವರೆ ವರ್ಷ ಕಂಟೆಂಟ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net