ಮಠ-ಮಾನ್ಯಗಳು ಮನುಷ್ಯನ ನೆಮ್ಮದಿಯ ಕೇಂದ್ರಗಳು

oplus_4194304
ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಮುರುಡೂರು ಗ್ರಾಮದಲ್ಲಿನ ಶ್ರೀ ಕಲ್ಲೇಶ್ವರಸ್ವಾಮಿ ಅವರ ಜಂಪೋತ್ಸವ ಶ್ರೀ ವೀರಭದ್ರೇಶ್ವರಸ್ವಾಮಿ ಕೆಂಡೋತ್ಸವ ಕಾರ್ಯಕ್ರಮವನ್ನು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಸಿಮೆಂಟ್ ಮಂಜು, ರೇಣುಕಾ ಪ್ರಸಾದ್, ಡಿ.ಎಸ್.ಜಯಣ್ಣ, ಮಹೇಶ್ ಇತರರಿದ್ದರು.
Published on

ಆಲೂರು: ಭಾರತ ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿಯ ಮುರುಡೂರು ಗ್ರಾಮದಲ್ಲಿ ಸೋಮವಾರ ಶ್ರೀ ಕಲ್ಲೇಶ್ವರಸ್ವಾಮಿ ಅವರ ಜಂಪೋತ್ಸವ, ಶ್ರೀ ವೀರಭದ್ರೇಶ್ವರಸ್ವಾಮಿ ಅವರ ಕೆಂಡೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧಾರ್ಮಿಕ ಚಿಂತನೆ, ಮನುಷ್ಯನ ನೆಮ್ಮದಿಗೆ ಜಾತ್ರಾ ಮಹೋತ್ಸವಗಳು ಸಹಕಾರಿ. ಭಾರತ ದೇಶವು ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕೃತಿಯ ತಳಹದಿಯಲ್ಲಿದೆ. ಭಾರತದ ಸಂಸ್ಕೃತಿ, ಪರಂಪರೆಯು ಪ್ರಪಂಚದಲ್ಲಿ ಶಾಂತಿ, ನೆಮ್ಮದಿ ಬಯಸುತ್ತದೆ. ಇದರಿಂದ ಇಡೀ ವಿಶ್ವ ಭಾರತವನ್ನು ತಿರುಗಿ ನೋಡುತ್ತಿದೆ. ಮಠ-ಮಾನ್ಯಗಳು ಮನುಷ್ಯನ ಮನಸ್ಸಿನ ನೆಮ್ಮದಿ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಮಠಮಾನ್ಯಗಳು ಜನರ ಅಧ್ಯಾತ್ಮ, ಧಾರ್ಮಿಕ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ಕೇಂದ್ರವಾಗಿವೆ ಎಂದು ತಿಳಿಸಿದರು.

ಕೊಡ್ಲಿಪೇಟೆಯ ಕಲ್ಲು ಮಠದ ಪೀಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ದಾನ-ಧರ್ಮವನ್ನು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಮನುಷ್ಯ ಜೀವನ ಪರಿಪೂರ್ಣವಾಗುತ್ತದೆ. ಇದರಿಂದ ಮುಂದಿನ ಜನ್ಮದಲ್ಲಿ ನಮಗೆ ಸುಖದ ಜತೆಗೆ, ವೈಭವದ ಜೀವನ ಸಿಗುತ್ತದೆ. ಇಲ್ಲದಿದ್ದರೆ ಎಲ್ಲ ಇದ್ದರೂ ಒಂದು ರೀತಿಯ ದಾರಿದ್ರೃ ಆವರಿಸುತ್ತದೆ. ಪರೋಪಕಾರ, ತ್ಯಾಗಿಗಳ ಸೇವೆ ಹಾಗೂ ಧರ್ಮ ಪಾಲನೆ ಮಾಡುವವರು ಎಂದೂ ಸುಖಿಯಾಗಿರುತ್ತಾರೆ ಎಂದರು.

ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ದೇಶ ಸಾಧು, ಸಂತರು ಹಾಗೂ ಪುಣ್ಯ ಪುರುಷರ ದಾರ್ಶನಿಕರ ಬೀಡು. ಆಧ್ಯಾತ್ಮಿಕ ಮತ್ತು ಯೋಗದ ನೆಲೆಯಾಗಿರುವ ಮತ್ತು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿರುವ ಭಾರತದ ನೆಲದಲ್ಲಿ ವಾಸಿಸುವವರೆಲ್ಲರೂ ಪುಣ್ಯವಂತರು. ಯಾರು ಧರ್ಮವನ್ನು ರಕ್ಷಣೆ ಮಾಡುವರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಶರಣರ ಮಾತುಗಳು ನಮಗೆ ಧರ್ಮ ಸಂಸ್ಕಾರಗಳನ್ನು ನೀಡಿ ಧರ್ಮದ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುರಡೂರು ಕೂಡಿಗೆಯಿಂದ ದೇವಸ್ಥಾನದವರೆಗೆ 108 ಕಳಸಗಳೊಂದಿಗೆ ಸ್ವಾಮೀಜಿಯವರೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಎಲ್ಲ ಭಕ್ತರಿಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಸುಂಕಾಪುರದ ಮಠದ ಪೀಠಾಧ್ಯಕ್ಷ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕೊಡ್ಲಿಪೇಟೆಯ ಕಿರಿಕೊಡ್ಲು ಮಠದ ಶ್ರೀ ಸದಾಶಿವ ಸ್ವಾಮೀಜಿ, ಶಾಸಕ ಸಿಮೆಂಟ್ ಮಂಜು, ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ವಕೀಲ ಮಹೇಶ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಗೂ ಸದ್ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net