ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ!

8-6830b9d6be11d
Published on

ಕೋಲ್ಕತ: ‘ಅಮ್ಮಾ.. ನಾನು ಚಿಪ್ಸ್ ಕದ್ದಿಲ್ಲ, ನಾನು ಕಳ್ಳ ಅಲ್ಲ’ ಎಂದು ಡೆತ್​ನೋಟ್ ಬರೆದಿಟ್ಟ 12 ವರ್ಷದ ಶಾಲಾ ಬಾಲಕನೊಬ್ಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಪ್ರಕರಣ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಪನ್​ಸ್ಕುರಾದಲ್ಲಿ ಗುರುವಾರ ಸಂಜೆ ನಡೆದಿದೆ.

ತನ್ನ ಅಂಗಡಿಯಿಂದ ಚಿಪ್ಸ್ ಪ್ಯಾಕೇಟ್ ಕದ್ದಿದ್ದಾನೆಂದು ಆರೋಪಿಸಿ ಮಾಲೀಕ ಸಾರ್ವಜನಿಕವಾಗಿ ಬಸ್ಕಿ ಹೊಡೆಸಿದ್ದರಿಂದ ಮನನೊಂದ ಏಳನೇ ತರಗತಿಯ ವಿದ್ಯಾರ್ಥಿ ಕೖಷ್ಣೇಂದು ದಾಸ್, ಮನೆಗೆ ಬಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗುರುವಾರ ಸಂಜೆ ಚಿಪ್ಸ್ ಖರೀದಿಗೆಂದು ಪನ್​ಸ್ಕುರಾದ ಗೋಸೈಬರ್ ಬಜಾರ್​ನ ಅಂಗಡಿಗೆ ಹೋಗಿದ್ದ ಬಾಲಕ, ‘ಅಂಕಲ್ ನನಗೆ ಚಿಪ್ಸ್ ಬೇಕು’ ಎಂದು ಪದೇಪದೇ ಹೇಳಿದರೂ ಯಾರೂ ಸ್ಪಂದಿಸದಿದ್ದಾಗ ಒಂದು ಪ್ಯಾಕೆಟ್ ತೆಗೆದುಕೊಂಡು ಹೊರಟಿದ್ದ. ಅಷ್ಟರೊಳಗೆ ಅಲ್ಲಿಗೆ ಬಂದ ಅಂಗಡಿ ಮಾಲೀಕ ಶುಭಂಕರ್ ದೀಕ್ಷಿತ್ ಅಟ್ಟಿಸಿಕೊಂಡು ಹೋಗಿ ಬಾಲಕನನ್ನು ಹಿಡಿದು ಚಿಪ್ಸ್ ಕದ್ದ ಆರೋಪ ಹೊರಿಸಿ ಕಪಾಳಮೋಕ್ಷ ಮಾಡಿದ್ದಲ್ಲದೆ ಸಾರ್ವಜನಿಕರೆದುರು ಬಸ್ಕಿ ಹೊಡೆಯುವಂತೆ ಬಲವಂತಪಡಿಸಿದ್ದ ಎಂದು ದಾಸ್ ತಾಯಿಯನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ತಾಯಿಯೊಂದಿಗೆ ಮನೆಗೆ ಮರಳಿದ ಬಾಲಕ, ತನ್ನ ಕೊಠಡಿಗೆ ಹೋಗಿ ಚಿಲಕ ಹಾಕಿಕೊಂಡಿದ್ದ. ಬಹಳ ಹೊತ್ತಾದರೂ ಹೊರಗೆ ಬಾರದಿದ್ದರಿಂದ ಗಾಬರಿಗೊಂಡ ಕುಟುಂಬ ಸದಸ್ಯರು ನೆರೆಹೊರೆಯವರ ನೆರವಿನಿಂದ ಬಾಗಿಲು ಒಡೆದಾಗ ದಾಸ್ ಕ್ರಿಮಿನಾಶಕ ಸೇವಿಸಿದ್ದು ಕಂಡುಬಂದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ‘ಅಂಕಲ್ (ಅಂಗಡಿ ಮಾಲೀಕ) ಸುಳ್ಳು ಹೇಳುತ್ತಿದ್ದಾರೆ. ನಾನು ಮರಳುವಾಗ ರಸ್ತೆಯಲ್ಲಿ ಬಿದ್ದಿದ್ದ ಕುರ್ಕರೆ ಪ್ಯಾಕೆಟ್ ಎತ್ತಿಕೊಂಡಿದ್ದೆ. ಐ ಲವ್ ಕುರ್ಕರೆ’ ಎಂದು ಡೆತ್​ನೋಟ್​ನಲ್ಲಿ ಬಾಲಕ ದಾಸ್ ಬರೆದಿರುವುದು ಎಂಥವರಿಗಾದರೂ ಕರುಳು ಚುರುಕ್ ಎನ್ನುವಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net