ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ಚಿತ್ರ ‘ರಾಕಾ’. ಕೆಲ ತಿಂಗಳ ಹಿಂದಷ್ಟೇ ಟೈಟಲ್ ಘೋಷಣೆ ಮಾಡಲಾಗಿತ್ತು. ಈಗಾಗಲೇ ಅಮೆರಿಕ, ಮುಂಬೈ ಸೇರಿ ವಿವಿಧೆಡೆ ಶೂಟಿಂಗ್ ನಡೆಸಲಾಗುತ್ತಿದೆ. ಇನ್ನು ಕಲಾ ಬಳಗದ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್, ದೀಪಿಕಾ ಪಡುಕೋಣೆ ಹೊರತುಪಡಿಸಿ, ಬೇರೆ ಕಲಾವಿದರ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ರಶ್ಮಿಕಾ ಮಂದಣ್ಣ, ಜಾಹ್ನವಿ ಕಪೂರ್, ಮೃಣಾಲ್ ಠಾಕೂರ್ ಈ ಸೈ-ಫೈ ಜಾನರ್‌ನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಈ ಮಧ್ಯೆ, ಮಲಯಾಳಂ ನಟಿ, ‘ಮಿನ್ನಾಲ್ ಮುರಳಿ’ ಖ್ಯಾತಿಯ ಫೆಮಿನಾ ಜಾರ್ಜ್ ‘ರಾಕಾ’ ತಂಡ ಸೇರಿರುವುದು ಖಚಿತವಾಗಿದೆ. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ‘‘ಡಿಸ್ಕೋ’ ಶೂಟಿಂಗ್ ಪೂರ್ಣಗೊಳಿಸಿ ಮನೆಗೆ ತೆರಳುವಾಗ ನಟ ವಿನೋದ್ ಚೆಂಬನ್ ಜೋಸ್ ಅವರಿಂದ ನನಗೆ ‘ರಾಕಾ’ ಚಿತ್ರದ ಆರ್ ಬಂತು. ಅವರು ಕೂಡ ‘ರಾಕಾ’ ಚಿತ್ರದಲ್ಲಿದ್ದಾರೆ. ಅಲ್ಲು ಅರ್ಜುನ್ ಜತೆ ನಟಿಸುವ ಅವಕಾಶ ಸಿಗುತ್ತದೆ ಎಂದು ನಾನು ಕನಸು-ಮನಸಿನಲ್ಲೂ ಊಹಿಸಿರಲಿಲ್ಲ. ಇದು ನನ್ನ ವೃತ್ತಿ ಬದುಕಿಗೆ ಮೈಲಿಗಲ್ಲಾಗಲಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ. ಮಾಡೆಲಿಂಗ್ ಲೋಕದಿಂದ ‘ಮಿನ್ನಾಲ್ ಮುರಳಿ’ ಮೂಲಕ ಮಾಲಿವುಡ್ ಪ್ರವೇಶಿಸಿದ್ದ ಫೆಮಿನಾ ಜಾರ್ಜ್ ಬಳಿಕ ‘ಶೇಷಂ’ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ‘ಡಿಸ್ಕೋ’ ಮತ್ತು ‘ರಾಕಾ’ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್