

ಮುಂಬೈ: ಕಿರುತೆರೆ ನಟ ಮೊಹ್ಸಿನ್ ಖಾನ್ ತನ್ನ ಆರೋಗ್ಯದ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದು, ಅಭಿಮಾನಿಗಳು ಚಿಂತಿತರಾಗಿದ್ದಾರೆ. ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯ ಮತ್ತು ಯಕೃತ್ ನೋವಿನಿಂದ ಬಳಲುತ್ತಿದ್ದುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.
32 ವರ್ಷದ ಈ ನಟ ಏಳು ವರ್ಷ ನಿರಂತರವಾಗಿ ಹೇಗೆ ಕೆಲಸ ಮಾಡಿದರು ಮತ್ತು ಅದು ಅವರ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರಿತು ಎಂಬುದರ ಕುರಿತು ವಿವರಿಸಿದ್ದಾರೆ.
ನನಗೆ ಫ್ಯಾಟಿ ಲಿವರ್ ಇರುವುದು ಪತ್ತೆಯಾಯಿತು. 2023 ರಲ್ಲಿ ನಾನು ಲಘು ಹೃದಯಾಘಾತಕ್ಕೊಳಗಾಗಿದ್ದೆ. ಆದರೆ ಈ ವಿಷಯವನ್ನು ನಾನು ಜನರೊಂದಿಗೆ ಹಂಚಿಕೊಳ್ಳಲಿಲ್ಲ ಎಂದು ಹೇಳಿದರು.
ಸ್ವಲ್ಪ ಸಮಯದವರೆಗೆ ನಾಉ ಆಸ್ಪತ್ರೆಯಲ್ಲಿದ್ದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡೆ. ಈ ನಡುವೆ 2-3 ಆಸ್ಪತ್ರೆಗಳನ್ನು ಬದಲಾಯಿಸಿದೆ. ಈಗ ಆರೋಗ್ಯ ಸುಧಾರಿಸಿದೆ ಎಂದು ಹೇಳಿದರು.
ನನ್ನ ದೇಹದ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ದುರ್ಬಲವಾಗಿತ್ತು. ನಾನು ಬಹಳಷ್ಟು ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆ ಎಂದು ಅವರು ನುಡಿದರು.
ಮೊಹ್ಸಿನ್ 2014 ರಲ್ಲಿ ನಿಶಾ ಔರ್ ಉಸ್ಕೆ ಕಸಿನ್ಸ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದು, ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಚಿತ್ರದಲ್ಲಿನ ಅವರ ಪಾತ್ರವು ಅವರಿಗೆ ರಾಷ್ಟ್ರವ್ಯಾಪಿ ಮನ್ನಣೆ ತಂದುಕೊಟ್ಟಿತು.