

ಕೋಲ್ಕತ್ತಾ: ಕೋಲ್ಕತ್ತಾ ಟ್ರೈನಿವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದ್ದರೆ, ಆರೋಪಿಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ವಿಷಯ ಬೆಳಕಿಗೆ ಬಂದಿದೆ. ಸಂಜಯ್ ರಾಯ್ ವೈದ್ಯೆಯನ್ನು ಹತ್ಯೆ ಮಾಡುವ ಮೊದಲು ಕೋಲ್ಕತ್ತಾದ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಸಂಭವಿಸಿದ ಆಗಸ್ಟ್ 8 ರ ರಾತ್ರಿ ಮದ್ಯ ಸೇವಿಸಿದ್ದ ರಾಯ್, ಆಸ್ಪತ್ರೆಯ ಇನ್ನೊಬ್ಬ ನಾಗರಿಕ ಸ್ವಯಂಸೇವಕನೊಂದಿಗೆ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಸೋನಗಚಿಗೆ ಹೋಗಿದ್ದ. ಅಲ್ಲಿ ರಾಯ್ ವೇಶ್ಯಾಗೃಹದ ಹೊರಗೆ ನಿಂತಿದ್ದು, ಅವನ ಸ್ನೇಹಿತ ಒಳಗೆ ಹೋಗಿದ್ದ. ಬಳಿಕ ರಾತ್ರಿ 2 ಗಂಟೆಗೆ ದಕ್ಷಿಣ ಕೋಲ್ಕತ್ತಾದ ವೇಶ್ಯಾಗೃಹಕ್ಕೆ ತೆರಳಿದ್ದರು. ಆ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ರಾಯ್ ಕಿರುಕುಳ ನೀಡಿದ್ದಾನೆ. ಕುಡಿದ ಅಮಲಿನಲ್ಲಿ ಆಕೆಗೆ ನಗ್ನ ಚಿತ್ರಗಳನ್ನು ಕೇಳಿದ್ದಾನೆ. ಮುಂಜಾನೆ 3.50 ರ ಸುಮಾರಿಗೆ ರಾಯ್ ಆಸ್ಪತ್ರೆ ತಲುಪಿದ್ದ.
ಅವನು ಮೊದಲು ಆಪರೇಷನ್ ಥಿಯೇಟರ್ ಬಾಗಿಲು ಮುರಿದು 4 ಗಂಟೆಗೆ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರವೇಶಿಸಿದ್ದಾನೆ. ನಂತರ ಮೂರನೇ ಮಹಡಿಯಲ್ಲಿ ಸೆಮಿನಾರ್ ಕೊಠಡಿಗೆ ಹೋಗಿದ್ದಾನೆ. ಆ ಸಮಯದಲ್ಲಿ ಸಂತ್ರಸ್ತೆ ಸೆಮಿನಾರ್ ಹಾಲ್‌ನಲ್ಲಿ ಗಾಢ ನಿದ್ದೆಯಲ್ಲಿದ್ದಾಗ ರಾಯ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮದ್ಯ ಸೇವಿಸಿ ಆಸ್ಪತ್ರೆಯ ಆವರಣದಲ್ಲಿ ಹಲವು ಬಾರಿ ತಿರುಗಾಡಿದ್ದಾನೆ. ಸಂತ್ರಸ್ತೆಯ ಸಾವು ಬೆಳಗ್ಗೆ ಬೆಳಕಿಗೆ ಬಂದಿದೆ.