ದರ್ಶನ್‌ಗೆ 40 ಲಕ್ಷ ರೂ ಹಣ ನೀಡಿದ್ದ ಮೋಹನ್‌ರಾಜ್ ವಿಚಾರಣೆ

darshna
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್ ಮೋಹನ್ ರಾಜ್ ಮತ್ತು ಚಿತ್ರ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನು ಶುಕ್ರವಾರ ವಿಚಾರಣೆ ನಡೆಸಿದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಎದುರು ಈ ಇಬ್ಬರು ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಮೂರು ಗಂಟೆಗಳ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ವೇಳೆ ಪೊಲೀಸರು ಆರೋಪಿ ನಟ ದರ್ಶನ್ ಬಳಿ ೪೦ ಲಕ್ಷ ರೂ. ನಗದು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಈ ಹಣವನ್ನು ಮಾಜಿ ಉಪಮೇಯರ್ ಮೋಹನ್ ರಾಜ್ ಬಳಿ ಪಡೆದಿದ್ದಾಗಿ ದರ್ಶನ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಮೋಹನ್ ರಾಜ್‌ಗೆ ನೋಟಿಸ್ ನೀಡಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದ ಮೋಹನ್ ರಾಜ್ ಅವರನ್ನು ತನಿಖಾಧಿಕಾರಿ ಪ್ರಕರಣ ಹಾಗೂ ನಟ ದರ್ಶನ್‌ಗೆ ನೀಡಿದ್ದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಟ ದರ್ಶನ್ ನಿಮ್ಮ ಬಳಿ ಹಣ ಪಡೆದಿದ್ದರ ಉದ್ದೇಶವೇನು? ಈ ಹಣದ ಮೂಲ ಏನು? ರೇಣುಕಸ್ವಾಮಿ ಕೊಲೆ ಬಗ್ಗೆ ನಿಮಗೆ ಮಾಹಿತಿ ಇತ್ತೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿದ್ದಾರೆ.
ಡೆವಿಲ್ ಚಿತ್ರದ ನಿರ್ದೇಶಕನ ವಿಚಾರಣೆ:
ಡೆವಿಲ್ ಚಿತ್ರದ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನು ತನಿಖಾಧಿಕಾರಿ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿದ್ದಾರೆ. ರೇಣುಕಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಮೈಸೂರಿಗೆ ತೆರಳಿದ್ದರು. ಮೈಸೂರಿನಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳಿದ್ದಾಗಿ ನಟ ದರ್ಶನ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಿಲನ ಪ್ರಕಾಶ್ ಅವರಿಗೆ ನೋಟಿಸ್ ಜಾರಿ ಮಾಡಿದ್ದ ತನಿಖಾಧಿಕಾರಿ ವಿಚಾರಣೆ ಮಾಡಿದ್ದಾರೆ. ಅಂದು ಮೈಸೂರಿನಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣ ಇತ್ತೇ? ನಟ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೇ? ರೇಣುಕಸ್ವಾಮಿ ಕೊಲೆ ಬಗ್ಗೆ ನಿಮಗೆ ಮಾಹಿತಿ ಇತ್ತೇ ಇತ್ಯಾದಿ ಪ್ರಶ್ನೆಗಳನ್ನು ಮಿಲನ ಪ್ರಕಾಶ್‌ಗೆ ಕೇಳಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್‌ನಿಂದ ಹಣ ಪಡೆದಿದ್ದೆ:
ವಿಚಾರಣೆ ಬಳಿಕ ಮೋಹನ್ ರಾಜ್ ಮಾತನಾಡಿ, ಶುಕ್ರವಾರ ೩ ಗಂಟೆಗೆ ವಿಚಾರಣೆಗೆ ಬರಲು ಪೊಲೀಸರು ತಿಳಿಸಿದ್ದರು. ಹೀಗಾಗಿ ವಿಚಾರಣೆ ಬಂದಿದ್ದೇನೆ. ಎಸಿಪಿ ಚಂದನ್, ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಸೇರಿ ನಾಲ್ಕು ಜನ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ಕೊಟ್ಟಿದ್ದೇನೆ. ನಟ ದರ್ಶನ್ ನನಗೆ ೨೦೧೦ ರಿಂದ ಪರಿಚಯವಿದ್ದಾರೆ. ದರ್ಶನ್ ಬಳಿ ೩ ತಿಂಗಳ ಹಿಂದೆ ಹಣ ಪಡೆದಿದ್ದೆ ಅದನ್ನು ಅವರಿಗೆ ವಾಪಸ್ ನೀಡಿದ್ದೆ ಅಷ್ಟೇ. ಸಿನಿಮಾ ವಿಚಾರಕ್ಕೆ ಹಣ ಕೊಟ್ಟಿಲ್ಲ. ಬದಲಾಗಿ ವೈಯಕ್ತಿಕ ವಿಚಾರಕ್ಕೆ ಹಣ ನೀಡಿದ್ದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net