ತಂದೆ ವಿರುದ್ಧ ಮಂಚು ಮನೋಜ್​ ದೂರು ದಾಖಲು; ಈ ಕುರಿತು ನಟ ಮೋಹನ್​ ಬಾಬು ಹೇಳಿದ್ದೇನು? | Mohan Babu

Untitled design - 2024-12-08T161425.076
Published on

ಹೈದರಾಬಾದ್​​: ಟಾಲಿವುಡ್​ ಹಿರಿಯ ನಟ ಮೋಹನ್ ಬಾಬು(Mohan Babu) ಕುಟುಂಬದಲ್ಲಿ ಆಸ್ತಿ ವಿವಾದ ತೀವ್ರ ಹಂತ ತಲುಪಿದೆ. ಈ ವಿವಾದದಲ್ಲಿ ನಟ ಮೋಹನ್ ಬಾಬು ಮತ್ತು ಅವರ ಪುತ್ರ ಮಂಚು ಮನೋಜ್ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ತಂದೆ ಮೋಹನ್ ಬಾಬು ಮತ್ತು ಮಗ ಮನೋಜ್ ನಡುವಿನ ದೀರ್ಘಕಾಲದ ವೈಷಮ್ಯ ಉಲ್ಬಣಗೊಂಡಿದೆ ಎಂಬ ವದಂತಿ ಹರಿದಾಡುತ್ತಿದೆ.

ತಂದೆ ಮೋಹನ್​​ ಬಾಬು ನನಗೆ ಥಳಿಸಿದ್ದು ಹಾಗೂ ನನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಮಂಚು ಮನೋಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೋಜ್ ಗಾಯಗೊಂಡು ಠಾಣೆಗೆ ಬಂದು ತನ್ನ ಮೇಲೆ ನಡೆದ ಹಲ್ಲೆಯ ವಿವರವನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಮೋಹನ್ ಬಾಬು ಕೂಡ ತಮ್ಮ ಮೇಲೆ ಮನೋಜೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆಸ್ತಿಗಳ ಹಸ್ತಾಂತರ ಮತ್ತು ಕುಟುಂಬಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳ ವ್ಯವಹಾರಗಳು ಈ ಸಂಘರ್ಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಲ್ಲದೆ ಇದೇ ವಿಚಾರವಾಗಿ ಕೆಲ ದಿನಗಳಿಂದ ಮಂಚು ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.

ನಟ ಮೋಹನ್​ ಬಾಬು ಹೇಳಿದ್ದೇನು?

ಆದರೆ ಈ ವಿಚಾರವನ್ನು ಸಾರಸಗಟಾಗಿ ನಟ ಮೋಹನ್​ ಬಾಬು ತಳ್ಳಿಹಾಕಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಮೋಹನ್ ಬಾಬು ಮತ್ತು ಮಂಚು ಮನೋಜ್ ಪರಸ್ಪರ ದೂರು ನೀಡಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಕೆಲವು ಮಾಧ್ಯಮಗಳು ಮಂಚು ಮನೋಜ್ ಥಳಿಸಿದ ಗಾಯಗಳೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಊಹಾಪೋಹದ ಕಥೆಗಳನ್ನು ಪ್ರಸಾರ ಮಾಡುತ್ತಿವೆ. ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಪ್ರಚಾರ ಮಾಡಬೇಡಿ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net