

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಟ್ಟರೆ ಸುಳ್ಳನ್ನೇ ಹೇಳುತ್ತಾರೆ. ಆಮೂಲಕ ಸುಳ್ಳಿನ ಸರದಾರ ಆಗಿದ್ದಾರೆ. ಮೋದಿಯವರು ಎಂದೂ ದೇಶದ ಐಕ್ಯತೆ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೇವಲ ಚುನಾವಣಾ ಪ್ರಚಾರ ಗಿಮಿಕ್ ಮಾಡುತ್ತಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ವರ್ಗಗಳ ಕಲ್ಯಾಣದ ವಿಚಾರದಲ್ಲಿ ದೇಶದ ಬೇರೆ ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ. ಇಷ್ಟಾದರೂ ಪ್ರಧಾನಮಂತ್ರಿಯವರು ಹರಿಯಾಣ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಲ್ಲಿ ದಲಿತ ಮತ್ತು ಹಿಂದುಳಿದವರ ಮೀಸಲಾತಿ ಕಸಿಯುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಮೀಸಲಾತಿ ವಿರುದ್ಧವಾಗಿ ನಿಂತಿರುವವರು ಆರ್‌ಎಸ್‌ಎಸ್ ಹಾಗೂ ಅವರ ಆಜ್ಞೆ ಪಾಲಿಸುತ್ತಿರುವ ಬಿಜೆಪಿ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬಂತೆ ಮೋದಿ ಅವರ ಕಣ್ಣಿಗೆ ಕಾಣೋದೆಲ್ಲ ಕೆಟ್ಟದ್ದೇ. ಚುನಾವಣೆಗಾಗಿ ಕೇವಲ ಸುಳ್ಳು ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ದಲಿತರ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಟ್ಟ ಉದಾಹರಣೆ ಇಲ್ಲ ಎಂದರು.
ಕರ್ನಾಟಕದಲ್ಲಿ ದಲಿತರ ಮೀಸಲಾತಿ ಎಲ್ಲೂ ಕಸಿದಿಲ್ಲ. ದಲಿತರ ಮೀಸಲಾತಿ ಕಿತ್ತು ಒಬಿಸಿಗೆ ಕೊಟ್ಟಿಲ್ಲ. ಗುತ್ತಿಗೆಯಲ್ಲೂ ಮೀಸಲಾತಿ ತಂದಿದ್ದು, ಬ್ಯಾಕ್‌ಲಾಗ್ ಹುದ್ದೆಗಳನ್ನು ತಂದಿದ್ದು ನಮ್ಮ ರಾಜ್ಯದಲ್ಲಿ. ಇಷ್ಟೆಲ್ಲಾ ಮಾಡಿದರೂ ಮೋದಿ ಸುಳ್ಳು ಹೇಳುತ್ತಾರೆ. ಪ್ರಧಾನಮಂತ್ರಿ ಹುದ್ದೆಯಲ್ಲಿ ಇರುವವರು ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿ, ಕರ್ನಾಟಕದಲ್ಲಿ ದಲಿತ, ಒಬಿಸಿ ಮೀಸಲಾತಿ ಕಿತ್ತು, ಮುಸ್ಲಿಮರಿಗೆ ಕೊಡ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಆಮೂಲಕ ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಮಹಾರಾಜರು. ಅವರು ಮುಸ್ಲಿಂರನ್ನ ಹಿಂದುಳಿದ ಅಂತ ಗುರುತಿಸುವಂತೆ ಸೂಚನೆ ನೀಡಿದರು. ಚಿನ್ನಪ್ಪ ಆಯೋಗ ಇದನ್ನು ಜಾರಿ ಮಾಡಿತು. ಅಂದಿನಿಂದ ಮುಸ್ಲಿಂರು ಒಬಿಸಿಗಳಾಗಿದ್ದಾರೆ ಎಂದರು.
ಇಷ್ಟು ವರ್ಷ ಮೀಸಲಾತಿ ವಿರೋಧಿಸಿ, ಈಗ ಇಡಬ್ಲ್ಯುಎಸ್ ತಂದವರು ಬಿಜೆಪಿಯವರು. ಮೀಸಲಾತಿ ಕೊಡಬೇಕಾದರೆ, ತೆಗೆಯಬೇಕಾದರೆ ಆಯೋಗ ಶಿಫಾರಸು ಬೇಕು. ಇವರು ಶಿಫಾರಸು ಇಲ್ಲದೆ ಮೀಸಲಾತಿ ಕೊಟ್ಟರು. ಸಾಮಾಜಿಕ ನ್ಯಾಯದ ವಿತರಕರು ನಾವೇ. ಟಿಪ್ಪು, ನಾಲ್ವಡಿ, ದೇವರಾಜ ಅರಸು, ಈಗ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಕೊಟ್ಟವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಮೀಸಲಾತಿಯನ್ನ ಅನುಷ್ಠಾನಕ್ಕೆ ತಂದವರು ಕಾಂಗ್ರೆಸ್‌ನವರು. ಮೀಸಲಾತಿ ವಿಚಾರದಲ್ಲಿ ರಾಜಿ ಇಲ್ಲ. 2ನೇ ದೇವರಾಜ್ ಅರಸು ಅಂದರೆ ಅದು ಸಿದ್ದರಾಮಯ್ಯ. ಅವರನ್ನ ಸಹಿಸಿಕೊಳ್ಳೋಕೆ ಬಿಜೆಪಿಗೆ ಆಗುತ್ತಿಲ್ಲ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್ ರಮೇಶ್, ರಾಮಚಂದ್ರಪ್ಪ ಮತ್ತಿತರು ಉಪಸ್ಥಿತರಿದ್ದರು.