ಲಾಕ್​ಡೌನ್​ ಮುಗಿಯಲು ಇನ್ನೆರಡೇ ದಿನ, ಮುಂದೇನು? ವಿವಿಧ ಸಚಿವರ ಜತೆ ಪ್ರಧಾನಿ ಸಭೆ

modi
Published on

ನವದೆಹಲಿ: ಲಾಕ್​ಡೌನ್​ ಮುಕ್ತಾಯಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇವೆ. ಲಾಕ್​ಡೌನ್​ ವಿಸ್ತರಣೆ ಮಾಡಬೇಕೆ? ಬೇಡವೆ? ಭಾಗಶಃ ಲಾಕ್​ಡೌನ್​ ಇರಬೇಕೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ಭೇಟಿಯಾಗಿ ಸಭೆ ನಡೆಸಿದರು.

ಲಾಕ್​ಡೌನ್​ ತೆರವುಗೊಂಡರೆ ವಿಮಾನ ಸಂಚಾರ, ರೈಲು ಸಂಚಾರ ಇತ್ಯಾದಿಗಳನ್ನೂ ಆರಂಭಿಸಬೇಕಾಗುತ್ತದೆ. ಇವುಗಳನ್ನು ಆರಂಭಿಸಿದರೆ ಉಂಟಾಗುವ ಸಮಸ್ಯೆಗಳೇನು? ಯಾವೆಲ್ಲಾ ರೀತಿಯ ಮುಂಜಾಗರೂಕತೆ ತೆಗೆದುಕೊಳ್ಳಬೇಕು ಇತ್ಯಾದಿಗಳ ಕುರಿತೂ ಈ ಸಭೆಯಲ್ಲಿ ಚರ್ಚಿಸುವ ಸಂಬಂಧ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರೂ ಭಾಗವಹಿಸಿದ್ದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಹಾಜರಿದ್ದರು.

ದೇಶದ ಆರ್ಥಿಕತೆಯನ್ನು ಹೆಚ್ಚಿಸುವ ಸಂಬಂಧ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಜತೆಗೆ, ಭಾರತಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಜತೆಗೆ ಸ್ಥಳೀಯ ಹೂಡಿಕೆಗಳನ್ನು ಉತ್ತೇಜಿಸುವ" ಕಾರ್ಯತಂತ್ರಗಳ ಕುರಿತೂ ಚರ್ಚಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ, ತೆಲಂಗಾಣದಲ್ಲಿ ಜಾರ್ಖಂಡ್​ನ ವಲಸೆ ಕಾರ್ಮಿಕರು ಸಿಲುಕಿ ಹಾಕಿಕೊಂಡಿದ್ದರು. ಅವರನ್ನು ವಾಪಸ್​ ಕಳಿಸುವ ನಿಟ್ಟಿನಲ್ಲಿ ಇಂದು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಲಾಕ್​ಡೌನ್​ ನಿಯಮಗಳನ್ನು ಪಾಲಿಸುವ ಮೂಲಕ ಒಂದು ಸಾವಿರ ಕಾರ್ಮಿಕರನ್ನು ರೈಲಿನ ಮೂಲಕ ತೆಲಂಗಾನದಿಂದ ಜಾರ್ಖಂಡ್​ಗೆ ಕಳುಹಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ.

ಅದೇ ವೇಳೆ ಲಾಕ್​ಡೌನ್​ ನಿರ್ಬಂಧ ಮುಗಿದ ಮೇಲೆ ವಿಮಾನಗಳ ಹಾರಾಟದ ಕಾರ್ಯಾರಂಭ ಹೇಗೆ ಮಾಡಬೇಕು ಎಂಬ ಬಗ್ಗೆಯೂ ಈಗಾಗಲೇ ಪ್ರಧಾನಿ ಚರ್ಚಿಸಿದ್ದಾರೆ. ಇಬ್ಬರು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಿಮಾನ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ಧರಿಸಲಾಗಿದೆ. ಆದರೆ ವಿಮಾನಯಾನವನ್ನು ಯಾವಾಗಿನಿಂದ ಶುರು ಮಾಡಬೇಕು ಎಂಬ ಬಗ್ಗೆ ಇದುವರೆಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net