2ನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ: ದೇಶದ ಜನರಿಗೆ ಮೋದಿ ಭಾವನಾತ್ಮಕ ಪತ್ರ

Modi 14 May 20
Published on

ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮೇ 30ಕ್ಕೆ ಒಂದು ವರ್ಷ. ಈ ಸಂದರ್ಭದಲ್ಲಿ ಮೋದಿ ಅವರು ದೇಶದ ಜನರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಬಿಜೆಪಿ/ಎನ್‌ಡಿಎಗೆ ಮತ್ತೊಮ್ಮೆ ಅಧಿಕಾರ ಕೊಟ್ಟಿರುವುದಕ್ಕೆ ಮತ್ತು ಕೇಂದ್ರ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ತುಂಬು ಹೃದಯದ ಸಹಕಾರ ಕೊಟ್ಟಿದ್ದಕ್ಕೆ ಜನರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕಳೆದ ವರ್ಷ ಈ ದಿನ (2019ರ ಮೇ 30) ಭಾರತದ ಇತಿಹಾಸದಲ್ಲಿಯೇ ಸುವರ್ಣ ಅಧ್ಯಾಯದ ದಿನ. ಹಲವು ದಶಕಗಳ ನಂತರ ದೇಶವಾಸಿಗಳು ಸಂಪೂರ್ಣ ಬಹುಮತದೊಂದಿಗೆ ಮತ್ತೊಂದು ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡಿದರು. ಇದಕ್ಕಾಗಿ ನಾನು 130 ಕೋಟಿ ಭಾರತೀಯರಿಗೆ ಮತ್ತು ಪ್ರಜಾತಂತ್ರದ ಮೌಲ್ಯಕ್ಕೆ ಮತ್ತೊಮ್ಮೆ ತಲೆಬಾಗುವೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ನಿಮ್ಮ ಒಲವು, ಸರ್ಕಾರದ ಬಗ್ಗೆ ಒಳ್ಳೆಯ ಭಾವನೆ ಮತ್ತು ಸಕ್ರಿಯ ಸಹಕಾರವೇ ನನಗೆ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ನೀಡಿದೆ. ಜನರ ಈ ಒಮ್ಮತವೇ ಪ್ರಜಾಪ್ರಭುತ್ವದ ಸಮಗ್ರ ಬಲ ಮತ್ತು ಇಡೀ ಜಗತ್ತಿಗೆ ದೀವಿಗೆಯೂ ಆಗಿದೆ ಎಂದು ಅವರು ಪತ್ರದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net